ಚಿತ್ರದುರ್ಗ: ನಗರೋತ್ಥಾನ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸರ್ವಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ದೀಪಾ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಹಲವಾರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಜನರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಪರೀತ ಧೂಳಿನ ಸಮಸ್ಯೆ ಉಂಟಾಗಿದೆ. ಮುಂದಿನ ಮೂರು ತಿಂಗಳೊಳಗೆ ರಸ್ತೆ ಕಾಮಗಾರಿಗಳನ್ನು ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹತೋಟಿಗೆ ತರಬೇಕಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ಚಳಿಗಾಲ, ಸಾಲು ಸಾಲು ಹಬ್ಬಗಳಿರುವುದರಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಗುಂಪು ಸೇರದಂತೆ ನೋಡಿಕೊಳ್ಳಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಎಚ್‌ಒ ಡಾ| ಪಾಲಾಕ್ಷ, ಡಿಎಸ್ ಡಾ| ಬಸವರಾಜ್ ಹಾಗೂ ಸರ್ವೇಕ್ಷಣಾ ಧಿಕಾರಿ ಡಾ| ತುಳಸಿರಂಗನಾಥ್ ಅವರಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿ 17 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. 12,786 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿದೆ. ಸರ್ಕಾರದ ಮಾನದಂಡದಂತೆ 17.21 ಕೋಟಿ ರೂ. ಪರಿಹಾರ ಸಿಗಬೇಕಿದೆ ಎಂದು ಮಾಹಿತಿ ನೀಡಿದರು. ಬೆಳೆ ಹಾನಿಗೆ ಸಂಬಂಧಿಸಿದಂತೆ ನಷ್ಟದ ವಿವರವನ್ನು ಆದಷ್ಟು ಬೇಗ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡಿದರು. ಅತಿವೃಷ್ಟಿಯಿಂದಾಗಿ ಕೃಷಿ ಬೆಳೆ ಹಾನಿಯಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅಧಿಕ ಮಳೆಯಾಗಿರುವುದರಿಂದ ಶೇಂಗಾ ಇಳುವರಿಯಲ್ಲಿ ಕುಂಠಿತವಾಗಿದೆ. ನಷ್ಟದ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಳವಡಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ತಿಳಿಸಿದರು.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76,538 ರೈತರು ಕರ್ನಾಟಕ ರೈತ ಸುರûಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಣಿ ಮಾಡಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ 39 ಗ್ರಾಪಂ, ಹಿರಿಯೂರು ತಾಲೂಕಿನ 33 ಗ್ರಾಪಂ, ಚಿತ್ರದುರ್ಗ ತಾಲೂಕಿನ 28 ಗ್ರಾಪಂ, ಮೊಳಕಾಲ್ಮೂರು ತಾಲೂಕಿನ 11 ಗ್ರಾಪಂ, ಹೊಸದುರ್ಗ ತಾಲೂಕಿನ 4 ಹೋಬಳಿಗಳು ಸೇರಿದಂತೆ ಒಟ್ಟು 50,577 ಫಲಾನುಭವಿಗಳಿಗೆ 7123.08 ಲಕ್ಷ ರೂ.ಗಳ ವಿಮಾ ಪರಿಹಾರ ಪಾವತಿಸಲಾಗಿದೆ. ಇಳುವರಿ ಆಧಾರದ ಮೇಲೆ 459 ಫಲಾನುಭವಿಗಳಿಗೆ 61.12 ಲಕ್ಷ ರೂ. ವಿಮೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾಹಿತಿ ನೀಡಿದರು.
ಡಿಡಿಪಿಐ ರವಿಶಂಕರ ರೆಡ್ಡಿ ಮಾತನಾಡಿ, 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 244 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿವಿಧ ಕಾರ್ಯಕ್ರಮಗಳ ಮೂಲಕ ನೇರ ದಾಖಲಾತಿ 21 ಮಕ್ಕಳು ಹಾಗೂ ಸ್ವಯಂಸೇವಕ ರಹಿತ ಕಾರ್ಯತಂತ್ರದಡಿ 161 ಮಕ್ಕಳು ಸೇರಿದಂತೆ ಒಟ್ಟು 182 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬಾಕಿ ಉಳಿದ 62 ಮಕ್ಕಳನ್ನು ತ್ವರಿತವಾಗಿ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಜಿಪಂ ಸಿಇಒ ಟಿ. ಯೋಗೇಶ, ಎಸ್ಪಿ ಜಿ. ರಾಧಿಕಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.