Advertisement

ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಿ

05:51 PM Oct 06, 2019 | Suhan S |

ರಾಯಬಾಗ: ಪಟ್ಟಣದ ಅಂಕಲಿ ರಸ್ತೆಯ ಅಗಲೀಕರಣಕ್ಕಾಗಿ ರಸ್ತೆಯ ಬದಿಯ ಕಟ್ಟಡಗಳನ್ನು ನೆಲಸಮಗೊಳಿಸಿ 3 ವರ್ಷಗಳಾದರೂ ಇನ್ನೂವರೆಗೆ ಮಾಸ್ಟರ್‌ ಪ್ಲಾನ್‌ ಪ್ರಕಾರ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದು ಆರೋಪಿಸಿ ಕರವೇ ಕಾರ್ಯಕರ್ತರು ಶನಿವಾರ ಪಟ್ಟಣದ ಝೇಂಡಾಕಟ್ಟೆ ಬಳಿ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಕಳೆದ 3 ವರ್ಷಗಳ ಹಿಂದೆ ರಸ್ತೆಅಗಲೀಕರಣಕ್ಕಾಗಿ ಪಟ್ಟಣದ ಅಂಕಲಿ ರಸ್ತೆ ಬದಿಯ ಕಟ್ಟಡಗಳನ್ನು ನೆಲಸಮಗೊಳಿಸಿದ್ದು, ಇನ್ನುವರೆಗೆ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಸಾರ್ವಜನಿಕರು ಮತ್ತು ವಾಹನ ಸವಾರರ ಸಂಚಾರಕ್ಕೆ ತುಂಬಾ ತೊಂದರೆ ಆಗಿದೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದ ರಸ್ತೆ ಬದಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ತೋಂದರೆಯಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಅಧಿಕಾರಿಗಳ ವರ್ತನೆಗೆ ಬೇಸತ್ತು ಶನಿವಾರ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ಅಧಿಕಾರಿಗಳು ನಿಯಮ ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದ ಕಾರ್ಯಕರ್ತರು, ಈ ಮೊದಲು ಇದ್ದ ರಸ್ತೆ ಡಿವೈಡರ್‌ ದಿಂದ ಸರಿಯಾಗಿ ಎರಡು ಬದಿ ಚರಂಡಿ ಮತ್ತು ರಸ್ತೆಯನ್ನು ಎಸ್ಟಿಮೇಟ್‌ ಪ್ರಕಾರ ನಿರ್ಮಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ರಾಯಬಾಗ-ಚಿಂಚಲಿ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ರಾಯಬಾಗ-ಜಲಾಲಪುರ ರಸ್ತೆಯನ್ನು 1 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿದ್ದು, ಈಗ ಮತ್ತೆ ರಸ್ತೆಎರಡು ಬದಿ ಕಟ್ಟಡಗಳನ್ನು ನೆಲಸಮ ಮಾಡುತ್ತಿರುವುದರಿಂದ ರಸ್ತೆ ಹಾಳಾಗಿ ಖರ್ಚು ಮಾಡಿದ ಸರಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಿಯಮದ ಪ್ರಕಾರ ಮತ್ತು ಮಾಸ್ಟರ್‌ ಪ್ಲಾನ್‌ ಪ್ರಕಾರ ಕಾಮಗಾರಿಗಳನ್ನು ಬೇಗನೆ ಮುಗಿಸದಿದ್ದರೆ ಬರುವ ದಿನಗಳಲ್ಲಿ ಲೋಕೋಪಯೋಗಿ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಡಿ.ಎಚ್‌.ಕೋಮರ, ಶೀಘ್ರ ಪಟ್ಟಣದ ರಸ್ತೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಟ್ಟಣದ ಝೇಂಡಾಕಟ್ಟೆ ಬಳಿ ಪ್ರತಿಭಟನಾಕಾರರು ರಸ್ತೆ ಬಂದ್‌ ಮಾಡಿದ್ದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಸುಮಾರು ಒಂದು ಗಂಟೆ ಕಾಲ ಪರದಾಡುವಂತಾಯಿತು. ರಸ್ತೆ ಬಂದ್‌ ಮಾಡಿದ್ದರಿಂದ ಸಿಪಿಐ ಮತ್ತು ಕರವೇ ಕಾರ್ಯಕರ್ತರು ನಡುವೆ ವಾಗ್ವಾದ ನಡೆಯಿತು.

ರಾಜುಗಡ್ಡಿ, ನಾರಾಯಣ ಮೇತ್ರಿ, ಅಮರ ತಾಳಿಕೋಟಿ, ರಾಜು ಕುಲಗುಡೆ, ಕಿರಣ ನಾವ್ಹಿ, ಪ್ರದೀಪ ಪಾಟೀಲ, ಮಹಾಂತೇಶ ಹಳಿಂಗಳಿ, ಬಸು ಬೆವನಮಟ್ಟಿ, ಯುವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next