Advertisement

“ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ’: ಸಂಸದೆ ಶೋಭಾ ಕರಂದ್ಲಾಜೆ

09:28 PM Aug 11, 2020 | mahesh |

ಉಡುಪಿ: ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ಜನ ಸಾಮಾನ್ಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಸೂಚಿಸಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ. ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾ.ಹೆ. 66 ಹಾಗೂ ಮಲ್ಪೆ, ಮೊಳಕಾಲ್ಮೂರು 169 ಎ ರಾ.ಹೆ. ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡು ಜನರ ಉಪಯೋಗಕ್ಕೆ ಅನೂಕೂಲವಾಗಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಅನನೂಕೂಲವಾಗಿದೆ. ಈ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಡಿಸೆಂಬರ್‌ ಒಳಗೆ ಹೆದ್ದಾರಿ ಕಾಮಗಾರಿ!
ಕಳೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಎಪ್ರಿಲ್‌ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಪೂರ್ಣಗೊಳ್ಳದ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್‌ನಿಂದಾಗಿ ಕಾರ್ಮಿಕರು ಸ್ವ ಗ್ರಾಮಗಳಿಗೆ ಮರಳಿದ ಹಿನ್ನೆಲೆಯಲ್ಲಿ ಪೂರ್ಣಗೊಳಿಸಲು ಆಗಿರುವುದಿಲ್ಲ. ಮುಂದಿನ ಡಿಸೆಂಬರ್‌ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಸಾರ್ವಜನಿಕರ ತೊಂದರೆಗೆ ಸ್ಪಂದಿಸಿ
ಕುಂದಾಪುರದ ವಿನಾಯಕ ಟಾಕೀಸ್‌ ಮುಂಭಾಗದಲ್ಲಿನ ರಾಷ್ಟಿಥಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಾರ್ವಜನಿಕರು ಸಂಚಾರಕ್ಕೆ ತೊಂದರೆಯಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿಯಾಂತರು ಸ್ಥಳ ಪರಿಶೀಲಿಸಿ ತ್ವರಿತ ಗತಿಯಲ್ಲಿ ಸರಿಪಡಿಸುವಂತೆ ತಿಳಿಸಿದರು.

ಬೈಪಾಸ್‌ ಮಾಡುವುದಿಲ್ಲ
ರಾಷ್ಟ್ರೀಯ ಹೆದ್ದಾರಿ 169ಎ ಹಿರಿಯಡ್ಕ ಮತ್ತು ಒಂತಿಬೆಟ್ಟು ನಗರದ ಒಳಭಾಗದಲ್ಲಿಯೇ ಹಾದು ಹೋಗುತ್ತಿದ್ದು, ಯಾವುದೇ ಬೈಪಾಸ್‌ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸ್ಥಳಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸುವಂತೆ ಸಂಸದರು ಸೂಚಿಸಿದರು.

Advertisement

ಟೋಲ್‌ಗೇಟ್‌: ವಿಐಪಿಗಳಿಗೆ ಪ್ರತ್ಯೇಕ ಮಾರ್ಗ
ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಗೇಟ್‌ ಗಳಲ್ಲಿ ಆ್ಯಂಬುಲೆನ್ಸ್‌ ಹಾಗೂ ವಿ.ಐ.ಪಿ.ಗಳ ವಾಹನ ಸಂಚರಿಸಲು ಪ್ರತ್ಯೇಕ ಮಾರ್ಗವನ್ನು ಕಾಯ್ದಿರಿಸಬೇಕೆಂದು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಕರಾವಳಿ ಬೈಪಾಸ್‌ ಹಾಗೂ ಪರ್ಕಳದ ರಾ.ಹೆ.ಯಲ್ಲಿ ಮಳೆಯಿಂದಾಗಿ ಗುಂಡಿಗಳಾಗಿದ್ದು ಇವುಗಳ ದುರಸ್ತಿ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಂಡು ಯಾವುದೇ ಅಪಘಾತಗಳು ಆಗದಂತೆ ಎಚ್ಚರ ವಹಿಸುವಂತೆ ಹಾಗೂ ಇದಕ್ಕಾಗಿ ಪ್ರತ್ಯೇಕ ಯಂತ್ರವನ್ನು ಹಾಗೂ ಸಿಬಂದಿಯನ್ನು ಮಳೆಗಾಲ ಮುಗಿಯುವವರೆಗೆ ನಿಯೋಜಿಸುವಂತೆ ಸೂಚನೆ ನೀಡಿದರು. ಬ್ರಹ್ಮಾವರ ಬಸ್‌ ಸ್ಟಾಂಡ್‌ ಬಳಿ ಅಂಡರ್‌ ಪಾಸ್‌, ಕಟಪಾಡಿಯಲ್ಲಿ ಅಂಡರ್‌ ಪಾಸ್‌ ನಿರ್ಮಾಣ, ಅಂಬಲಪಾಡಿ ಜಂಕ್ಷನ್‌ ಬಳಿಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಶಾಸಕ ರಘುಪತಿ ಭಟ್‌, ಡಿ.ಸಿ. ಜಿ. ಜಗದೀಶ್‌, ರಾ.ಹೆ. ಪ್ರಾಧಿಕಾರದ ಎಂಜಿನಿಯರ್‌ ಗಳು ಉಪಸ್ಥಿತರಿದ್ದರು.

ಕೋವಿಡ್‌ ನಿರ್ಲಕ್ಷ್ಯ ಬೇಡ
ಜಿಲ್ಲೆಯಲ್ಲಿ ಕೋವಿಡ್‌ -19 ನಿಂದ ಮಾತ್ರವೇ ಮರಣಗಳು ಸಂಭವಿಸಿಲ್ಲ. ಕೋವಿಡ್‌ನೊಂದಿಗೆ ಕ್ಯಾನ್ಸರ್‌, ಕಿಡ್ನಿ ಸಮಸ್ಯೆ ಮುಂತಾದ ಇತರೆ ಖಾಯಿಲೆಗಳಿಂದ ಮರಣ ಸಂಭವಿಸಿವೆ. ನಾಗರಿಕರು ರೋಗ ಲಕ್ಷಣ ಕಂಡ ಕೂಡಲೇ ಫೀವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್‌ಗೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಸಂಸದರು ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಗಳನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next