ಚಿಕ್ಕಬಳ್ಳಾಪುರ: ಸಮುದಾಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೈಗೆತ್ತಿಕೊಳ್ಳಲಾಗಿರುವ ಪ್ರಾಜೆಕ್ಟ್-100 ನರೇಗಾ ವಿವಿಧ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ಸೂಚಿಸಿದರು.
ಜಿಲ್ಲೆಯ ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿರುವ ಸಮುದಾಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಮಲ್ಟಿ ಚೆಕ್‌ಡ್ಯಾಂ ನಿರ್ಮಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ, ಕುಂಟೆಗಳ ಹೂಳು ಎತ್ತುವುದರ ಜೊತೆಗೆ ವಿಶೇಷವಾಗಿ ಸಮುದಾಯ ಅಭಿವೃದ್ಧಿಗಾಗಿ ಅಂಗನವಾಡಿ ಕೇಂದ್ರಗಳ ನಿರ್ಮಾಣ, ಶಾಲಾ ಕಾಂಪೌಂಡ್ ನಿರ್ಮಾಣ, ಅಂತರ್ಜಲದ ಅಭಿವೃದ್ಧಿಗೆ ಮಲ್ಟಿ ಚೆಕ್‌ಡ್ಯಾಂ ನಿರ್ಮಾಣ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ರಾಸುಗಳಿಗೆ ಕುಡಿಯುವ ನೀರಿನ ತೊಟ್ಟಿ, ರೈತರ ಹೊಲಗಳಲ್ಲಿ ಬದುಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರಸ್ತೆ ದುರಸ್ತಿ: ಜಿಲ್ಲೆಯಲ್ಲಿ ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಸ್ತೆಗಳು ಹದಗೆಟ್ಟಿರುವುದರಿಂದ ನರೇಗಾ ಯೋಜನೆಯಡಿ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ವ್ಯಾಪಕವಾಗಿ ಮಾಡಲಾಗುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಪಂ ಸಿಇಒ ತಿಳಿಸಿದರು.
ಪ್ರಾಜೆಕ್ಟ್-100 ಯೋಜನೆಯಡಿ ಕೈಗೊಂಡಿರುವ ನರೇಗಾ ಕಾಮಗಾರಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಯೋಜನೆಗಳ ಲಾಭ ಜನ ಸಾಮಾನ್ಯರಿಗೆ ಸಿಗುವಂತೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಗೌರಿಬಿದನೂರು ಹಾಗೂ ಗುಡಿಬಂಡೆ ತಾಪಂ ಇಒ ಮುನಿರಾಜು ಎರಡು ತಾಲೂಕುಗಳಲ್ಲಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನರೇಗಾ ಯೋಜನೆಯ ತಾಂತ್ರಿಕ ಸಿಬ್ಬಂದಿ, ನರೇಗಾ ಅಭಿಯಂತರರು ಸೇರಿದಂತೆ ಸ್ಥಳೀಯ ಗ್ರಾಪಂಗಳ ಚುನಾಯಿತ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾದ್ಯಂತ ಉದ್ಯೋಗ ಖಾತ್ರಿಯೋಜನೆಯಡಿ ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಒತ್ತು ಕೊಡಲಾಗಿದೆ. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.
-ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ