Advertisement
ಅಂತಾರಾಷ್ಟ್ರೀಯ ಜಲ ದಿನಾಚರಣೆ ಸಂದರ್ಭದಲ್ಲಿ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿರುವ ಅವರು, ಅಗೋಚರ ಅಂತರ್ಜಲವನ್ನು ಗೋಚರಿಸುವಂತೆ ಮಾಡುವುದು, 2022ನೇ ಸಾಲಿನ ವಿಶ್ವ ಜಲ ದಿನಾಚರಣೆ ಘೋಷವಾಕ್ಯವಾಗಿದೆ. ಆದರೆ ನಮ್ಮ ಕಣ್ಣೆದುರಿಗೆ ವ್ಯರ್ಥವಾಗುತ್ತಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿರುವುದು ನೋವಿನ ಸಂಗತಿ. ಎಲ್ಲ ಜಲ ಮೂಲಗಳನ್ನು ಸಮರ್ಪಕ ತಂತ್ರಜ್ಞಾನ, ಜಾಣ್ಮೆ- ದೂರದೃಷ್ಟಿಯಿಂದ ಬಳಸಿಕೊಳ್ಳುವುದು ಅವಶ್ಯ ಎಂದು ಅವರು ಹೇಳಿದ್ದಾರೆ.
Related Articles
Advertisement
ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ಮುಧೋಳ-ರಾಮದುರ್ಗ ತಾಲೂಕಿನ 10 ಸಣ್ಣ ನೀರಾವರಿ ಕೆರೆ ತುಂಬಿಸುವ ಜತೆಗೆ 17,377 ಹೆಕ್ಟೇರ್ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಬಹುದು. ರಾಮೇಶ್ವರ ಮತ್ತು ವೀರಭದ್ರೇಶ್ವರ ಯೋಜನೆಗಳಿಂದ ವಂಚಿತವಾದ ರಾಮದುರ್ಗ ತಾಲೂಕಿನ 19 ಗ್ರಾಮಗಳು, ಬಾದಾಮಿ ತಾಲೂಕಿನ 6 ಗ್ರಾಮಗಳು, ಮುಧೋಳ ತಾಲೂಕಿನ 2 ಗ್ರಾಮಗಳ 13,000 ಹೆಕ್ಟೇರ್ ಪ್ರದೇಶಕ್ಕೆ 2 ಹಂತಗಳಲ್ಲಿ 566 ಕೋಟಿ ಮೊತ್ತದ ಸಾಲಾಪುರ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. ಬಾದಾಮಿ-ನರಗುಂದ ತಾಲೂಕಿನ 1578 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವ ಕೊಣ್ಣೂರು ಏತ ನೀರಾವರಿ ಯೋಜನೆ ಆಡಳಿತಾತ್ಮಕ ಅನುಮೋದನೆ ದೊರೆತರೂ ಭೂ ಸ್ವಾಧೀನ ಪ್ರಕ್ರಿಯೆಯಿಂದ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಹೆರಕಲ್ ಏತ ನೀರಾವರಿ ಯೋಜನೆಯ ಪೂರ್ಣಫಲ ಪಡೆದು 45 ಸಾವಿರ ಎಕರೆ ಪ್ರದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಕರ್ಯ ಕಲ್ಪಿಸಬೇಕಾದರೆ ಕೈನಕಟ್ಟಿ ಬಳಿ ಕೈಗೆತ್ತಿಕೊಂಡಿರುವ ಹೆರಕಲ್ ದಕ್ಷಿಣ ವಿಸ್ತರಣೆ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇವುಗಳಲ್ಲದೇ ತುಬಚಿ-ಬಬಲೇಶ್ವರ ಯೋಜನೆ, ರಾಮಥಾಳ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿದರೆ ಗರಿಷ್ಠ ಪ್ರಯೋಜನ ಜಿಲ್ಲೆಯ ರೈತರಿಗೆ ದೊರೆಯಲಿದೆ ಎಂದು ಹೇಳಿದ್ದಾರೆ.
ಜಮಖಂಡಿ ತಾಲೂಕಿನ ಹುನ್ನೂರ ಕಡಪಟ್ಟಿ ಏತ ನೀರಾವರಿ ಯೋಜನೆ, ಕೊಣ್ಣೂರ-ಮರೆಗುದ್ದಿ ಏತ ನೀರಾವರಿ ಯೋಜನೆ, ಬೀಳಗಿ-ಮುಧೋಳ ತಾಲೂಕಿನ ಕೆರೆ ತುಂಬಿಸುವ ಮಂಟೂರ ಏತ ನೀರಾವರಿ ಯೋಜನೆ, ಘಟಪ್ರಭಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದ ನೀರಾವರಿ ಕೊರತೆ ಅನುಭವಿಸುತ್ತಿರುವ ಜಮೀನುಗಳಿಗಾಗಿ ಅನವಾಲ ಏತ ನೀರಾವರಿ ಯೋಜನೆ, ಮುಧೋಳ, ರಬಕವಿ-ಬನಹಟ್ಟಿ ತಾಲೂಕುಗಳ ಬಹುದಿನದ ಬೇಡಿಕೆ ಸಸಾಲಟ್ಟಿ ಯೋಜನೆ, ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗಳಿಗೆ ಸರ್ಕಾರ ಶೀಘ್ರವೇ ಮಂಜೂರಾತಿ ನೀಡಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಲಭ್ಯವಿರುವ ಜಲ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡರೆ ಭವಿಷ್ಯದ ನೀರಿನ ಆತಂಕ ದೂರ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರ, ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.