Advertisement

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

04:27 PM Aug 19, 2019 | Suhan S |

ರಾಮನಗರ: ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀವಿ ವಿಭಾಗಗಳಲ್ಲಿ ಬಾಕಿ ಇರುವ ಅರಣ್ಯ ಜಮೀನುಗಳ ಡಿ.ನೋಟಿಫಿಕೇಷನ್‌ ಪ್ರಸ್ತಾವನೆಗಳ ಪ್ರಗತಿ ಹಾಗೂ ಇತರೆ ವಿಷಯಗಳ ಕುರಿತು ಆಗಸ್ಟ್‌ 31ರಂದು ನಡೆಯುವ ಸಭೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀ ವಿಭಾಗಗಳಲ್ಲಿ ಸಿದ್ಧರಬೆಟ್ಟ, ಹಂದಿಗುಂದಿ, ರಾಮದೇವರಬೆಟ್ಟ, ಬನ್ನೇರುಘಟ್ಟ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ಬಾಕಿ ಇರುವ ಅರಣ್ಯ ಜಮೀನುಗಳ ಡಿ ನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮಾಹಿತಿ ಸಂಗ್ರಹ: ಅರಣ್ಯ ಜಮೀನುಗಳ ಡಿ ನೋಟಿಫಿಕೇಷನ್‌ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಸಂಸದ ಡಿ.ಕೆ.ಸುರೇಶ್‌, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಅವುಗಳ ಹೊಣೆ ಹೊತ್ತು ಪೂರ್ಣಗೊಳಿಸುವುದಾಗಿ ತಿಳಿಸಿದರು.

ಬೆಂಗಳೂರಿಗೆ ಪರ್ಯಾಯ ರಸ್ತೆ ಎಸ್‌ಟಿಆರ್‌ಆರ್‌ ರಸ್ತೆ: ಎಸ್‌.ಟಿ.ಆರ್‌.ಆರ್‌ ರಸ್ತೆ ಹೊಸಕೋಟೆಯಿಂದ ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ಮಾರ್ಗವಾಗಿ ಹೊಸೂರು ಸೇರುವ ಸುಮಾರು 180 ಕಿ.ಮಿ ರಸ್ತೆ, ಬೆಂಗಳೂರಿಗೆ ಪರ್ಯಾಯವಾಗುವಂತಹ ರಸ್ತೆ. ಸದರಿ ರಸ್ತೆಗೆ ಭೂ ಸ್ವಾಧೀನ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ಸಭೆಯ ಗಮನ ಸೆಳೆದರು.

Advertisement

ಪರಿಹಾರ ಕಂಡುಕೊಳ್ಳಿ: ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ 275 ಮತ್ತು 209ಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಸಮಸ್ಯೆಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ಬಳಿ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕು. ತಕ್ಷಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಸೂಚಿಸಿದರು.

ಕಾಮಗಾರಿ ಪ್ರಾರಂಭ: ಕನಕಪುರ- ಚಾಮರಾಜನಗರ ರಸ್ತೆ, ಬೆಂಗಳೂರಿನಿಂದ ನೈಸ್‌ ಜಂಕ್ಷನ್‌ ರಸ್ತೆಯಿಂದ ಮಾಗಡಿ- ಕುಣಿಗಲ್ -ಸೋಮವಾರಪೇಟೆ ಸೇರುವ ರಸ್ತೆ, ಬಿಡದಿ- ಹಾರೋಹಳ್ಳಿ- ಆನೇಕಲ್- ಹೊಸಕೋಟೆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸೇರುವ ಕಾಮಗಾರಿ ಪ್ರಾರಂಭವಾಗಿದ್ದು, ಇದಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಸಮಸ್ಯೆಗಳಿಗೆ ಸಂಬಂಧಪಟ್ಟ ಅರಣ್ಯ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಬೆಸ್ಕಾಂ, ಸರ್ವೆ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ, ಭೂ ಸ್ವಾಧೀನದ ಸಮಸ್ಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾಮಗಾರಿಗಳನ್ನು ವೇಗವಾಗಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಬಿ.ಪಿ.ಜಯ್‌, ಉಪವಿಭಾಗಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next