ಬೀದರ: ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಂಟಿ ಸಮೀಕ್ಷೆ ಕಾರ್ಯಕ್ಕೆ ಜಿಲ್ಲಾಡಳಿತ ಆದೇಶಿಸಿದ್ದು, ಈಗ ಬಾಕಿ ಉಳಿದ ಬೆಳೆ ಸಮೀಕ್ಷೆ ಕಾರ್ಯವನ್ನುಕೂಡ ಕಾಲಮಿತಿಯೊಳಗಡೆ ಪೂರ್ಣಗೊಳಿಸಬೇಕು ಎಂದು ಡಿಸಿ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ವಿವಿಧೆಡೆಗಳಲ್ಲಿ ಭಾಗಶಃ ಹಾಗೂ ಸಂಪೂರ್ಣ ಮನೆಗಳು ಕುಸಿದಿವೆ. ರಸ್ತೆ ಮತ್ತು ಸೇತುವೆಗಳು ಹಾಳಾಗಿವೆ. ಪ್ರವಾಹ ಪರಿಸ್ಥಿತಿ ಎದುರಾದಂತಾಗಿದೆ. ಕೆಲವೆಡೆ ಜೀವಹಾನಿಯಾದ ಬಗ್ಗೆ ವರದಿಯಾಗಿದೆ. ಮನೆ ಹಾನಿ ಆಗಿರುವ ಬಗ್ಗೆ ನೋಟ್ ಕ್ಯಾಮ್ ಆ್ಯಪ್ ಮೂಲಕ ಛಾಯಾಚಿತ್ರಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾಂಜ್ರಾ ನದಿ ತೀರದಲ್ಲಿ ಇರುವ ಭಾಲ್ಕಿ ಮತ್ತು ಕಮಲನಗರ ಗಡಿ ಗ್ರಾಮಗಳು ವಿಶೇಷ ಗಮನ ಹರಿಸಬೇಕು. ಬಾಂದಾರ ಸೇತುವೆ, ಕೆರೆ ಹಳ್ಳಗಳ ಸಂಪೂರ್ಣ ಮಾಹಿತಿ ದಾಖಲಿಸಬೇಕು. ಪ್ರವಾಹದಿಂದ ಜನರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಪರಿಹಾರ ಕೇಂದ್ರಗಳಲ್ಲಿ ಆಹಾರ, ಶುದ್ಧ ಕುಡಿಯುವ ನೀರು, ಶುಚಿತ್ವ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂದರು.
ಪರಿಹಾರ ಕೇಂದ್ರಗಳಲ್ಲಿ ಇರುವವರಿಗೆ ಕೋವಿಡ್ -19 ಹಿನ್ನೆಲೆಯಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲು ಮತ್ತು ಸೊಳ್ಳೆ ಪರದೆ ವಿತರಿಸಲು ಡಿಎಚ್‌ಒ ಕ್ರಮ ವಹಿಸಬೇಕು. ಅಲ್ಲಿ ಆಹಾರ, ನೀರು ಸಿಕ್ಕಿಲ್ಲ ಎಂದು ದೂರು ಬಾರದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಾಪಂ ಇಒಗಳು ಕ್ರಮ ವಹಿಸಬೇಕು. ಜತೆಗೆ ಪರಿಹಾರ ಕೇಂದ್ರಗಳಲ್ಲಿ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಎಸ್‌ಪಿಗೆ ಸಲಹೆ ಮಾಡಿದರು.
ಪ್ರಕೃತಿ ವಿಕೋಪ ಪ್ರದೇಶಗಳಲ್ಲಿ ತುರ್ತು ಕೆಲಸಕ್ಕೆ ಸಲಕರಣೆಗಳು ಬೇಕಾದಲ್ಲಿ ಸ್ಥಳೀಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಖರೀದಿಸಲು ಅವಕಾಶ ನೀಡಲಾಗಿದೆ. ಯಾವುದೇ ಗ್ರಾಮ ಮಳೆಯಿಂದಾಗಿ ತೊಂದರೆಗೀಡಾದರೆ ಪರಿಹಾರ ಕೇಂದ್ರ ತೆರೆಯಲು ಅಲ್ಲಿನ ಯಾವುದಾದರೂ ಎತ್ತರದಲ್ಲಿರುವ ಪ್ರತ್ಯೇಕ ಸ್ಥಳವನ್ನು ಗುರುತಿಸಬೇಕು. ಪಿಡಿಒ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಯಾವುದೇ ರೀತಿ ಜೀವಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಎಸ್‌ಪಿ ನಾಗೇಶ ಡಿ.ಎಲ್., ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನವಾರ ಇದ್ದರು.