Advertisement

ಕಾಲಮಿತಿಯೊಳಗೆ ನೋಂದಣಿ ಪೂರ್ಣಗೊಳಿಸಿ

10:43 AM Jun 19, 2019 | Suhan S |

ಹಾವೇರಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಜಿಲ್ಲೆಯ ರೈತರ ನೋಂದಣಿ ಪ್ರಕ್ರಿಯೆ ಅಭಿಯಾನದ ಮಾದರಿಯಲ್ಲಿ ಕೈಗೊಂಡು ಹತ್ತು ದಿನದೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ರೈತರ ನೋಂದಣಿ ಕುರಿತಂತೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಇಂದಿನಿಂದಲೇ ರೈತರಿಂದ ದಾಖಲೆಗಳನ್ನು ಪಡೆಯಬೇಕು. ಯುದ್ಧೋಪಾದಿಯಲ್ಲಿ ಕಾರ್ಯಕೈಗೊಂಡು ಕಾಲಮಿತಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.

ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲ ರೈತರಿಗೆ ವಾರ್ಷಿಕ 6 ಸಾವಿರ ರೂ. ಗಳನ್ನು ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ಯೋಜನೆ ಇದಾಗಿದ್ದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯ ರೈತರಿಗೆ ತ್ವರಿತ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಮಾಹಿತಿ ಸಂಗ್ರಹ ಹಾಗೂ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಒಳಗೊಂಡಂತೆ ಗ್ರಾಮ ಹಂತದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಪ್ರತಿ ಅಧಿಕಾರಿಗಳಿಗೆ ನಿತ್ಯ ಇಂತಿಷ್ಟು ದಾಖಲೆ ಸಂಗ್ರಹ ಹಾಗೂ ನೋಂದಣಿ ಗುರಿ ನಿಗದಿಪಡಿಸಬೇಕು. ಈ ಕುರಿತಂತೆ ತಾಲೂಕು ವಾರು ಸಭೆ ನಡೆಸಿ ನೋಂದಣಿ ಪ್ರಕ್ರಿಯೆಗೆ ಅಗತ್ಯ ಕ್ರಮ ವಹಿಸುವಂತೆ ತಹಶೀಲ್ದಾರಗಳಿಗೆ ಸೂಚಿಸಿದರು.

ಡಿಸೆಂಬರ್‌ 2018ರಲ್ಲಿ ಕಿಸಾನ್‌ ಯೋಜನೆ ಘೋಷಣೆಯಾಗಿದ್ದು, ಇದೀಗ ಪರಿಷ್ಕೃರಿಸಿ ಕೃಷಿ ಸಾಗುವಳಿ ಭೂಮಿ ಹೊಂದಿದ ಸಣ್ಣ ಅತೀ ಸಣ್ಣ ರೈತರು ಒಳಗೊಂಡಂತೆ ಎಲ್ಲ ರೈತರಿಗೂ ಸೌಲಭ್ಯ ವಿಸ್ತರಿಸಿ ಜೂನ್‌ 2019 ರಂದು ಭಾರತ ಸರ್ಕಾರದ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.

Advertisement

ಅನುಬಂಧದ ಪ್ರಕಾರ ರೈತರಿಂದ ಸ್ವಯಂ ಘೋಷಣೆ ಪಡೆಯಬೇಕು. ಅರ್ಜಿದಾರರ ಹೆಸರು, ಲಿಂಗ, ವಯಸ್ಸು, ಆಧಾರ್‌ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ವರ್ಗ, ಬ್ಯಾಂಕ್‌ ಖಾತೆ, ಐಎಸ್‌ಎಫ್‌ಸಿ ಕೋಡ್‌ಗಳನ್ನು ಪಡೆಯಬೇಕು ಹಾಗೂ ಸಾಗುವಳಿ ಖಾತೆಯ ಸಂಖ್ಯೆಯೊಂದಿಗೆ ದಾಖಲಿಸಬೇಕು ಹಾಗೂ ಫಲಾನುಭವಿಗಳಿಂದ ಯಾವುದೇ ಸಂವಿಧಾನಿಕ ಹುದ್ದೆ ಹೊಂದಿಲ್ಲ, ಸರ್ಕಾರಿ ಹುದ್ದೆ ಹೊಂದಿಲ್ಲ, ತೆರಿಗೆ ಪಾವತಿಸುವುದಿಲ್ಲ ಎಂಬ ಸ್ವಯಂ ಘೋಷಣೆಯ ದೃಢೀಕರಣ ಪಡೆಯಬೇಕು. ಈ ಕುರಿತಂತೆ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ, ಕೃಷಿ ಸಹಾಯಕರಿಗೆ ಅಥವಾ ಗ್ರಾಪಂ ಅಧಿಕಾರಿಗಳಿಗೆ ತ್ವರಿತವಾಗಿ ಒದಗಿಸುವಂತೆ ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಎನ್‌. ತಿಪ್ಪೇಸ್ವಾಮಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ, ಕೃಷಿ ಉಪನಿರ್ದೇಶಕ ಹುಲಿರಾಜ ಹಾಗೂ ವಿವಿಧ ತಾಲೂಕಿನ ತಹಶೀಲ್ದಾರಗಳು, ತಾಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next