Advertisement

ಸಂಪೂರ್ಣ ಸಾಲಮನ್ನಾ ಪ್ರಸ್ತಾವ: ಕೊಡಗು ಬ್ಯಾಂಕರ್ ಸಭೆ ನಿರ್ಧಾರ

06:00 AM Sep 09, 2018 | |

ಮಡಿಕೇರಿ: ಮಹಾಮಳೆಯಿಂದ ಜಿಲ್ಲೆಯಾದ್ಯಂತ ಕಾಫಿ ಮತ್ತು ಕರಿಮೆಣಸು ಬೆಳೆಗೆ ಶೇ.70ರಷ್ಟು ಹಾನಿಯಾಗಿರುವುದರಿಂದ ಕೊಡಗಿನ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಮನ್ವಯ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

Advertisement

ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ ಅವರು, ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ 6 ಗ್ರಾ.ಪಂ.ಗಳು ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಪೂರ್ಣವಾಗಿ ನಾಶವಾಗಿದ್ದು, ಈ ಹಿನ್ನೆಲೆಯಲ್ಲಿ ಆ ಗ್ರಾ.ಪಂ.ವ್ಯಾಪ್ತಿಯ ಜನತೆ ಪಡೆದಿರುವ ಯಾವುದೇ ಸಾಲವನ್ನು 3 ತಿಂಗಳವರೆಗೆ ವಸೂಲು ಮಾಡಲು ಮುಂದಾಗದಿರುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸಲಹೆ ಮಾಡಿದರು. ಅಲ್ಲದೆ ಈ ಅವಧಿಯಲ್ಲಿ ಅವರುಗಳ ಸಾಲವನ್ನು ಮನ್ನಾ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರಲ್ಲದೆ, ಈ ನಿಟ್ಟಿನಲ್ಲಿ ತಾವುಗಳು ಕೂಡ ಸರಕಾದ ಮಟ್ಟದಲ್ಲಿ ವ್ಯವಹರಿಸುವುದಾಗಿ ಹೇಳಿದರು.

ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಯಿಂದಾಗಿ ಬಹುತೇಕ ಎಲ್ಲಾ ವಿಧದ ಫ‌ಸಲು ಶೇ.70ರಷ್ಟು ಹಾನಿಯಾಗಿ ರುವುದರಿಂದ ಜಿಲ್ಲೆಯಾದ್ಯಂತ ಮೂರು ತಿಂಗಳ ಕಾಲ ಯಾವುದೇ ಸಾಲ ವಸೂಲಿಗೆ ಮುಂದಾಗಬಾರದು ಎಂದು ಸಲಹೆ ಮಾಡಿದರು.

ಸಾಲ ಮನ್ನಾ ಸೂಕ್ತ 
ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಮಾತನಾಡಿ, ಮಹಾಮಳೆ ಹಾಗೂ ಪ್ರಕೃತಿ ವಿಕೋಪದಿಂದ ಇಡೀ ಕೊಡಗಿನ ಜನತೆ ಇಂದು ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬೆಳೆಗಾರರು ಪಡೆದಿರುವ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಈ ಕುರಿತು ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು.ಸಂಪೂರ್ಣ ಸಾಲ ಮನ್ನಾ ಸಾಧ್ಯವಾಗದಿದ್ದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನತೆ ಪಡೆದಿರುವ ಸಾಲವನ್ನು ಮುಂದಿನ 5 ವರ್ಷಗಳವರೆಗೆ ಮರುಪಾವತಿಗೆ ಒತ್ತಾಯಿಸಬಾರದು. ಅಲ್ಲದೆ ಆ ಬಳಿಕ ಕೂಡಾ ಅಸಲನ್ನು ಮಾತ್ರ ವಸೂಲು ಮಾಡಬೇಕು ಎಂದು ಬ್ಯಾಂಕರ್‌ಗಳಲ್ಲಿ ಮನವಿ ಮಾಡಿದರು.

Advertisement

ಕೊಡಗು ಜಿಲ್ಲೆಯ ಜನತೆ ಎಂದೂ ಸಾಲ ಮನ್ನಾಕ್ಕೆ ಒತ್ತಾಯಿಸಿದವರಲ್ಲ. ಅಲ್ಲದೆ ಸಾಲ ಮರುಪಾವತಿಯಲ್ಲೂ ಪ್ರಾಮಾಣಿಕತೆ ಮೆರೆದಿದ್ದಾರೆ. ಆದರೆ ಅಂತಹವರೇ ಇಂದು ಸಂಕಷ್ಟಕ್ಕೆ ಸಿಲುಕಿರುವುದರಿಂದ ಕೊಡಗಿನ ಜನತೆ ಹೊಂದಿರುವ ಸುಮಾರು 1400 ಕೋಟಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ಇದಕ್ಕೆ ಕೆಲವು ಬ್ಯಾಂಕರ್‌ಗಳು ಕೂಡಾ ಧ್ವನಿಗೂಡಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಬ್ಯಾಂಕ್‌ಗಳಿಗೂ ಕಷ್ಟವಾಗುತ್ತದೆ. ಆದರೆ ಸ್ಥಳೀಯವಾಗಿ ಪರಿಹಾರ ನಿಧಿ ಸ್ಥಾಪಿಸಿದಲ್ಲಿ ಬ್ಯಾಂಕ್‌ಗಳು ಕೂಡಾ ಸ್ಪಂದಿಸಬಹುದಲ್ಲದೆ, ಹಲವು ದಾನಿಗಳು ಕೂಡಾ ಆ ಖಾತೆಗೆ ಹಣ ನೀಡಲು ಸಿದ್ಧರಿದ್ದಾರೆ ಎಂದು  ಗಮನಸೆಳೆದರು.

ಸಂಸದ ಶಾಸಕರ ಭರವಸೆ
ಅ ಈ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಸಂಸದ ಪ್ರತಾಪ್‌ಸಿಂಹ ಹಾಗೂ ಶಾಸಕ ಅಪ್ಪಚ್ಚುರಂಜನ್‌ ಭರವಸೆ ನೀಡಿದರು.

ಜಿಲ್ಲಾ ಮಾರ್ಗದರ್ಶಿ (ಲೀಡ್‌)ಬ್ಯಾಂಕ್‌ ವ್ಯವಸ್ಥಾಪಕ ಗುಪ್ತಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಪೊàರೇಷನ್‌ ಬ್ಯಾಂಕ್‌ ಮೈಸೂರು ವಲಯದ ಡಿಜಿಎಂ ಎಸ್‌.ಎಲ್‌ ಗಣಪತಿ, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಎಂ.ಸಿ.ನಾಣಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್‌ ಮಿಶ್ರಾ ಮತ್ತಿತರರು ಹಾಜರಿದ್ದರು. 

ಸಂಸದರ ನಿಧಿಯಿಂದ 2.50ಕೋಟಿ
ಸಂಸದರ ನಿಧಿಯಿಂದ 2.50ಕೋಟಿ: ಕೊಡಗಿನ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಾನು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2.50 ಕೋಟಿ ರೂ.ಗಳನ್ನು ಒದಗಿಸುವುದಾಗಿ ಇದೇ ಸಂದರ್ಭ ಘೋಷಿಸಿದ ಪ್ರತಾಪ್‌ಸಿಂಹ ಅವರು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರ ಪ್ರಯತ್ನದಿಂದ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 57 ಕೋಟಿ ರೂ.ಗಳನ್ನು ಒದಗಿಸಲು ಮುಂದಾಗಿದ್ದು, ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಬ್ಯಾಂಕ್‌ಗಳು ಕೂಡಾ ತಮ್ಮ ಸಿಎಸ್‌ಆರ್‌ ನಿಧಿಯಿಂದ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ನೆರವು ನೀಡುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next