Advertisement

ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

04:20 PM Sep 08, 2021 | Team Udayavani |

ಗೌರಿಬಿದನೂರು: ವಾಹನ ಸವಾರರ ಪಾಲಿಗೆ ಕಂಟಕವಾಗಿರುವ ರಾಷ್ಟ್ರೀಯ ಹೆದ್ದಾರಿ – 234ರ ಅಭಿವೃದ್ಧಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸ
ಬೇಕು, ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯು ಪ್ರತಿಭಟಿಸಿ, ಬಂದ್‌ ಆಚರಿಸಿತು.

Advertisement

ಮಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ತಾಲೂಕಿನಲ್ಲೂ ಹಾದು ಹೋಗಿದೆ. ಗೌರಿಬಿದನೂರು – ಚಿಕ್ಕಬಳ್ಳಾಪುರ ನಡುವೆ 10 ವರ್ಷಗಳಿಂದ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ವಾಹನ ಸವಾರರು ಜೀವಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ: ಗ್ರಾಮದ ಬಸ್‌ ನಿಲ್ದಾಣದಲ್ಲಿ ಪೆಂಡಲ್‌ ಹಾಕಿ, ಹೆದ್ದಾರಿಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದ ನಾಗರಿಕರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ವಿರುದ್ಧಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್‌ ಹಿನ್ನೆಲೆಯಲ್ಲಿ ಹೋಟೆಲ್‌, ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆಯಿಂದ ಸಂಜೆ 6ರವರೆಗೆ ಮುಚ್ಚಿ ಮಾಲಿಕರು ಬೆಂಬಲ ಸೂಚಿಸಿದರು.

ಕಾಮಗಾರಿ ಮುಗಿಯುತ್ತಿಲ್ಲ: ರಾಷ್ಟ್ರೀಯ ಹೆದ್ದಾರಿ 234 ಅಭಿವೃದ್ಧಿ ಕಾಮಗಾರಿ ಆರಂಭವಾಗಿ 10 ವರ್ಷ ಆಗಿದೆ. ಕೆಲವು ಕಡೆ ಜಲ್ಲಿ ಹಾಕಿ ಹಾಗೆ ಬಿಡಲಾಗಿದೆ, ಕೆಲವು ಕಡೆ ಡಾಂಬರೀಕರಣ ಮಾಡಿದ್ದರೂ ಕಿತ್ತು ಹೋಗಿದೆ. ಮಳೆ ಬಂದರೆ ಕೆಸರುಮಯ, ಬೇಸಿಗೆ ಯಲ್ಲಿ ದೂಳು, ಇದರಿಂದ ಹೆದ್ದಾರಿ ಪಕ್ಕದ ರೈತರ ಬೆಳೆ ಹಾಳಾಗುತ್ತಿದೆ. ಈ ಸಂಬಂಧ ಹಲವು ಬಾರಿ ರೈತರು, ನಾಗರಿಕರು ಪ್ರತಿಭಟನೆ ನಡೆಸಿದರೂ ಹೆದ್ದಾರಿ ಪ್ರಾಧಿ
ಕಾರದ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿಲ್ಲ.

ಇದನ್ನೂ ಓದಿ:ಕೋವಿಡ್ : ಮನೆಮನೆಗೆ ತೆರಳಿ ಲಸಿಕೆ ನೀಡಿಯೆಂದು ಆದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಅಭಿಪ್ರಾಯ

Advertisement

ಜಿಲ್ಲಾಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಲಿ: ಹೆದ್ದಾರಿ ಉದ್ದಕ್ಕೂ ಗುಂಡಿಗಳು ಬಿದ್ದಿವೆ, ಕೆಲವು ಕಡೆ ಅರ್ಧ ರಸ್ತೆ ಅಗೆದು, ಕೆಲವು ಕಡೆ ಜಲ್ಲಿ ರಾಶಿ ಹಾಕಿ ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸಂಚರಿಸಲು ಸಾಧ್ಯವಾಗದಂತಾಗಿದೆ. ಕೆಲವು ಕಡೆ ಚರಂಡಿ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ ಕೈಬಿಟ್ಟಿರುವ ಪರಿಣಾಮ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ಬೈಕಿನಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ನೌಕರ ರೊಬ್ಬರು ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅಪಘಾತಕ್ಕೆ ಆಹ್ವಾನ: ಹದಗೆಟ್ಟಿರುವ ಈ ಹೆದ್ದಾರಿಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸುತ್ತಲೇ ಇವೆ. ಈರದಿಮ್ಮಮ್ಮನ ಕಣಿವೆ ಮೂಲಕ ಬರುತ್ತಿದ್ದ ಬಸ್‌ ಉರುಳಿಬಿದ್ದಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಬೈಕ್‌ ಸವಾರರ ಗೋಳು ಕೇಳುವುದೇ ಬೇಡ. ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಹಲವು ಮಂದಿ ವಾಹನ ಸವಾರರು ಗಾಯ ಗೊಂಡು ಶಾಶ್ವತ ಅಂಗವೈಕಲ್ಯತೆಗೆ ತುತ್ತಾಗಿದ್ದಾರೆ. 10 ವರ್ಷಗಳಿಂದ ಜನ ನರಕಯಾತನೆ ಅನುಭವಿ ಸುತ್ತಿದ್ದರೂ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಕೆ.ಸುಧಾಕರ್‌ ಇತ್ತ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾನಿರತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಗೌರಿಬಿದನೂರು ತಾಲೂಕಿನ ಜನರು ಈ ಹೆದ್ದಾರಿ ಬಳಸುತ್ತಾರೆ. ಸರ್ಕಾರಿ ಕಚೇರಿಗಳು,ಖಾಸಗಿ ಕಾರ್ಖಾನೆ,ಕಂಪನಿಗಳ ಉದ್ಯೋಗಿಗಳು, ಜಿಲ್ಲಾಕೇಂದ್ರದಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಜಿಲ್ಲಾಸ್ಪತ್ರೆಗೆಹೋಗುವ ರೋಗಿಗಳು, ಸರ್ಕಾರಿ,ಖಾಸಗಿ ಬಸ್‌ಗಳು,ಕಾರು, ಬೈಕು, ಲಾರಿಗಳು ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಇಷ್ಟು ಸಂಚಾರ ದಟ್ಟಣೆ ಹೊಂದಿರುವ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿದೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ.
– ಖಂಲಂಧರ್‌, ಗ್ರಾಮ ಪಂಚಾಯ್ತಿ ಅಧ್ಯಕ್ಷ

ಮೃತ್ಯುಕೂಪವಾಗಿರುವ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟ ಸಚಿವರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದ್ದರೂ ಸ್ಪಂದಿಸುವಲ್ಲಿ ವಿಫ‌ಲರಾಗಿದ್ದಾರೆ. ಹಾಗಾಗಿ ಮಂಚೇನಹಳ್ಳಿ ಬಂದ್‌ ಮಾಡುವ ಮೂಲಕ ಉಗ್ರ ಪ್ರತಿಭಟನೆ
ಮಾಡುತ್ತಿದ್ದೇವೆ.
– ಪಿ.ಪ್ರಕಾಶ್‌, ಜಿಲ್ಲಾ ಪರಿಷತ್‌
ಮಾಜಿ ಸದಸ್ಯ. ಕಾಂಗ್ರೆಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next