ಯಾದಗಿರಿ: ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಭೀಮಾ ಸೇತುವೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿವ ನೀರಿನ ಘಟಕದ ಜಾಕ್‌ವೆಲ್ ಸ್ಥಳಕ್ಕೆ ಭೇಟಿ ನೀಡಿದ ಅವರು, ಮಳೆಗಾಲದ ಸಮಯ ಆಗಿರುವುದರಿಂದ ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಅಲ್ಲದೇ ಜನರಿಗೆ ಜ್ವರ, ವಾಂತಿ ಭೇದಿ ಇನ್ನಿತರ ರೋಗಗಳು ಕಾಡುತ್ತಿವೆ. ಜನರ ಟೀಕೆಗೆ ನಾವು ಗುರಿಯಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ನಗರೋತ್ಥಾನ ಹಂತ-3 ಕುಡಿಯುವ ನೀರು ಪೂರೈಕೆ 19.90 ಕೋಟಿ ರೂ. ಅನುದಾನ ನೀಡಿ ವರ್ಷ ಕಳೆದಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಭೀಮಾ ನದಿಯಿಂದ ನಗರದ ಡಾನ್ ಬಾಸ್ಕೊ ಶಾಲೆವರೆಗೆ 3 ಕಿ.ಮೀ ಪೈಪ್‌ಲೈನ್ ಮಾಡಲಾಗಿದೆ. ಇದಿಗ ಅಲ್ಲಿಂದ ಫಿಲ್ಟರ್ ಬೇಡ್ ವರೆಗೆ ಪೈಪ್ ಲೈನ್ ಮಾಡಲು ಹೆಚ್ಚಿನ ಅನುದಾನ ನೀಡಬೆಕೇಂದು ಪ್ರಸ್ತಾವನೆ ಸಲ್ಲಿಸಿದ್ದಿರಿ. ಆದರೆ ಇಲ್ಲಿ ವಾಸ್ತವಿಕವಾಗಿ ಜಾಕ್‌ವೆಲ್ ಕಾಮಗಾರಿ ಪೂರ್ಣಗೊಂಡಿಲ್ಲ. ವಿದ್ಯುತ್ ಟ್ರಾನ್ಸ್‌ಫರ್ ಕೂಡಿಸಿಲ್ಲ. ಅಲ್ಲದೆ ಸೂಕ್ತ ರಸ್ತೆ ಕೂಡ ನಿರ್ಮಾಣ ಮಾಡಿಲ್ಲ. ಹೀಗಾದರೆ ಎಂದು ನೀರು ಜನರಿಗೆ ತಲುಪಿಸುತ್ತಿರಿ ಎಂದು ಕಾಮಗಾರಿ ಕೈಗೊಂಡಿರುವ ಪುಣೆ ಮೂಲದ ಹರಿಹಂತ ಕಂಪನಿಯ ಗುತ್ತಿಗೆದಾರ ಹಾಗೂ ಕೆ.ಯು.ಡಬ್ಲೂ. ಎಸ್.ಡಿ.ಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾನು ಕೂಡ ಈ ಮಹತ್ವದ ಯೋಜನೆ ಅನುಷ್ಠಾನ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿದ್ದೇವೆ. ನಗರದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಂಬಿಗೇರ ತಿಳಿಸಿದರು. ನಗರ ಸಭೆ ಅಧಿಕಾರಿಗಳಾದ ಲಿಂಗಾರೆಡ್ಡಿ, ನಾಗರಾಜ ಇತರರು ಇದ್ದರು.