ಕಾರವಾರ: ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೊದಲ ಬ್ಯಾಚ್ 2020ಕ್ಕೆ ಪದವಿ ಪಡೆದುಕೊಂಡು ಹೊರಬರಲಿದ್ದು, ಮೆಡಿಕಲ್ ಕಾಲೇಜಿನ ಕೊನೆ ವರ್ಷದ ಮಾನ್ಯತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವಿಧಿಸಿದ್ದ ಶರತ್ತಾದ 450 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ನೀಲನಕಾಶೆ ಸಿದ್ಧವಾಗಿದೆ. ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಅಂತಿಮ ಹಂತದ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಕಾರವಾರ ಜನರ ಬಹುದಿನಗಳ ಕನಸಾಗಿದ್ದ ನೂತನ ಆಸ್ಪತ್ರೆ ನಿರ್ಮಣ ಇದೀಗ ನನಸಾಗುತ್ತಿದೆ. ಜೊತೆಗೆ ಎಂಬಿಬಿಎಸ್ ವಿದ್ಯಾರ್ಥಿಗಳ ಸಂಖ್ಯೆ ಇದೇ ಶೈಕ್ಷಣಿಕ ವರ್ಷ 300 ತಲುಪಲಿದ್ದು, ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್ನ ಮತ್ತೂಂದು ಮಹಡಿ ನಿರ್ಮಿಸಲು ಸರ್ಕಾರ ಹೆಚ್ಚುವರಿಯಾಗಿ 25 ಕೋಟಿ ರೂ. ಮಂಜೂರಿ ಮಾಡಿದೆ. ಮಳೆಗಾಲ ಮುಗಿಯುತ್ತಿದ್ದಂತೆ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮನಗೆಲ್ಲಲು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಾರವಾರ ಮೆಡಿಕಲ್ ಕಾಲೇಜು ನಿರ್ದೇಶಕರು ಸಕಲ ಸಿದ್ಧತೆ ಮಾಡಿಕೊಂಡು, ಸರ್ಕಾರದ ಪರವಾಗಿ ಎಂಸಿಎ ಎದುರು ಕಾರವಾರ ಮೆಡಿಕಲ್ ಕಾಲೇಜಿನ ಪ್ರಗತಿ ಮತ್ತು ಸೌಲಭ್ಯಗಳನ್ನು ವಿವರಿಸಿದ್ದಾರೆ.
ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೂರನೇ ವರ್ಷದಿಂದ ಮೊದಲ ವರ್ಷದತನಕ 450 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 7 ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ನಡೆಯುತ್ತಿದ್ದು, 140 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿವರ್ಷ 60 ವಿದ್ಯಾರ್ಥಿನಿಯರು ನರ್ಸಿಂಗ್ ಕಲಿಯುತ್ತಿದ್ದಾರೆ. 100 ವೈದ್ಯರು ಮೆಡಿಕಲ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ ಸಾವಿರ ದಾಟಿದೆ. 300 ಜನ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಎಕ್ಸರೇ, ಬ್ಲಿಡ್ ಬ್ಯಾಂಕ್, ಪ್ರಯೋಗಾಲಯ, ಟ್ರೋಮೊ ಸೆಂಟರ್(ಮೊದಲ ಹಂತ) ಉನ್ನತೀಕರಣ ಗೊಂಡಿವೆ. ಆಪರೇಶನ್ ಥೇಟರ್ ಸಂಖ್ಯೆ 3 ರಿಂದ 5 ಕ್ಕೆ ಹೆಚ್ಚಿಸಲಾಗಿದೆ. ಔಷಧಿ ಸಂಗ್ರಹ ಉಗ್ರಾಣ ನವೀಕರಣವಾಗಿದೆ.
Advertisement
125 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ನೀಡಿದ್ದು, ಹಣಕಾಸು ಇಲಾಖೆ 450 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಮುಂದಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Related Articles
Advertisement
ಮೆಡಿಕಲ್ ಕಾಲೇಜು ಸ್ಥಾಪನೆಯ ನಂತರ: ತಜ್ಞ ವೈದ್ಯರ ಸೇವೆ ಒದಗಿಸುವ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು 2016 ರಿಂದ ಅನುಷ್ಠಾನಗೊಳಿಸಲಾಗಿದೆ. 7 ವಿಷಯಗಳಲ್ಲಿ ಸೂಪರ್‌ಸ್ಪೆಶಲಿಸ್ಟ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 4 ವಿಷಯಗಳಲ್ಲಿ ಪಿ.ಜಿ. ಕೋರ್ಸನ್ನು 2018ರಿಂದ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ದ್ವಿತೀಯ ಹಂತದ ಟ್ರಾಮಾಕೇಂದ್ರ ಸ್ಥಾಪನೆ ಕಾರ್ಯ ಅನುಮೋದನೆ ಹಂತದಲ್ಲಿದೆ. 2018 ರಿಂದ ವಿಮಾ ಕಾರ್ಮಿಕರಿಗೆ ತಜ್ಞ ಸೇವೆ ಒದಗಿಸುವ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. 2017 ರಿಂದ ರೋಗಿಗಳ ಸಂಬಂಕರುಗಳಿಗೆ ಸ್ವಯಂ-ಸೇವಾ ಸಂಘದ ಮೂಲಕ ಉಚಿತ ಊಟ ವಿತರಿಸಲಾಗುತ್ತಿದೆ. ಸ್ವಯಂ ದೇಹದಾನ ಮಾಡಲು ಸಹಕಾರ ಸಂಘವನ್ನು ನೋಂದಾಯಿಸಲಾಗಿದೆ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಐಎಂಎ ಘಟಕವನ್ನು ಸ್ಥಾಪಿಸಲಾಗಿದೆ. ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ರೇಡಿಯೋ ಕಾರ್ಯಕ್ರಮದ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಸುಲಭ ಶೌಚಾಲಯ, ಬಸ್‌ನಿಲ್ದಾಣ ಹಾಗೂ ಹಾಲು ವಿತರಣಾ ಫಟಕಗಳನ್ನು ಸ್ಥಾಪಿಸಲಾಗಿದೆ. ಸುಸಜ್ಜಿತವಾದ 2 ಅಂಬ್ಯುಲೆನ್ಸ್‌ಗಳನ್ನು ಖರೀದಿ ಮಾಡಲು ಸರ್ಕಾರದ ಅನುಮತಿ ಕೇಳಲಾಗಿದೆ.
ಮೆಡಿಕಲ್ ಕಾಲೇಜು:
ಕಾರವಾರ ಮೆಡಿಕಲ್ ಕಾಲೇಜಿನ ಕನಸು ನನಸಾಗಿದೆ. ವೈದ್ಯಕೀಯ ಸೌಲಭ್ಯಗಳು ನಿಧಾನಕ್ಕೆ ಜನರನ್ನು ತಲುಪುತ್ತಿದೆ. ಇನ್ನೊಂದು ವರ್ಷದಲ್ಲಿ ಹೆಚ್ಚಿನ ವೈದ್ಯಕೀಯ ಸೌಕರ್ಯ ಜನತೆಯನ್ನು ತಲುಪಲಿವೆ. 450 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ ಸಹ ಇನ್ನೊಂದು ವರ್ಷದಲ್ಲಿ ಬರಲಿದೆ. ಎಂಬಿಬಿಎಸ್ ವಿದ್ಯಾರ್ಥಿಗಳು ಮೊದಲ ಬ್ಯಾಚ್ ಸಹ 2020ಕ್ಕೆ ಹೊರ ಬರಲಿದೆ. • ಡಾ| ಶಿವಾನಂದ ದೊಡ್ಮನಿ,ನಿರ್ದೇಶಕರು, ಕಿಮ್ಸ್ ಕಾರವಾರ
ಉಚಿತ ಸಿಟಿ ಸ್ಕ್ಯಾನ್ ಸೇವೆ ಪ್ರಾರಂಭ:
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಬಿಪಿಎಲ್ ಸೇರಿದಂತೆ ಎಪಿಎಲ್ ಮತ್ತು ಶ್ರೀಮಂತರಿಗೂ ಉಚಿತವಾಗಿ ಸಿಟಿ ಸ್ಕ್ಯಾನ್ ಸೌಲಭ್ಯ ದೊರೆತಿದೆ. ಜನರು ತುರ್ತು ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಪಡೆಯ ಬಹುದಾಗಿದೆ. ಓಪಿಡಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದು ಸಾವಿರ ತಲುಪಿದೆ. ಇದಕ್ಕೆ ತಕ್ಕಂತೆ ವಾರ್ಡ್ ಸಂಖ್ಯೆ ಹೆಚ್ಚಿದ್ದು, 80ಕ್ಕೂ ಹೆಚ್ಚು ವೈದ್ಯರು ಪಾಳಿ ಮೇಲೆ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ ಮೆಡಿಕಲ್ ಕಾಲೇಜಿನ ಪ್ರಯೋಜನ ನಿಧಾನಕ್ಕೆ ಜನರನ್ನು ತಲುಪತೊಡಗಿದೆ. ಕ್ಯಾನ್ಸರ್ ಆಸ್ಪತ್ರೆ ಘಟಕ ಸ್ಥಾಪನೆಗೆ ಸರ್ಕಾರ ಸಮ್ಮಿತಿಸಿದ್ದು, ಇದಕ್ಕಾಗಿ ಪ್ರತ್ಯೇಕ ವಾರ್ಡ್‌ಗೆ 5 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ.
• ನಾಗರಾಜ ಹರಪನಹಳ್ಳಿ