Advertisement

ಕಾಲಮಿತಿಯೊಳಗೆ ಕ್ರಿಯಾಯೋಜನೆ ಪೂರ್ಣಗೊಳಿಸಿ

09:21 PM Aug 21, 2019 | Team Udayavani |

ಚಾಮರಾಜನಗರ: ವಿವಿಧ ಇಲಾಖೆಗಳ ಕ್ರಿಯಾಯೋಜನೆ, ಕಾರ್ಯಕ್ರಮಗಳ ಅನುಷ್ಠಾನವನ್ನು ವಿಳಂಬಮಾಡದೇ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಲತಾಕುಮಾರಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಅಧಿಕಾರಿಗಳಿಗೆ ಸೂಚನೆ: ಅಂಗನವಾಡಿ ಹಾಗೂ ಶಾಲಾ ಹಾಸ್ಟೆಲ್‌ಗ‌ಳ ನಿರ್ಮಾಣ ಹಾಗೂ ನಿರ್ವಹಣೆಯ ಟೆಂಡರ್‌ ಕ್ರಿಯಾ ಯೋಜನೆ ಪ್ರಕ್ರಿಯೆಗಳನ್ನು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಿ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನೆರೆ ಪ್ರದೇಶಕ್ಕೆ ಮೊದಲು ಆದ್ಯತೆ ನೀಡಿ: ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಾದ ದಾಸನಪುರ ಹಾಗೂ ಹಳೇ ಅಣಗಳ್ಳಿ ಗ್ರಾಮಗಳಿಗೆ ಕುಡಿಯುವ ನೀರು, ಶೌಚಾಲಯ, ಚರಂಡಿ, ರಸ್ತೆ ದುರಸ್ತಿಗಳ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಗಳ ನೋಡೆಲ್‌ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫ‌ಲಿತಾಂಶ ಬರಲಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶದಲ್ಲಿ ಶೇ.50 ಕ್ಕಿಂತ ಕಡಿಮೆಗಳಿಸಿರುವ ಶಾಲೆಗಳಿಗೆ ನೋಟಿಸ್‌ ಜಾರಿಮಾಡಿ. ಮುಂಬರುವ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫ‌ಲಿತಾಂಶ ನೀಡಲು ಅಗತ್ಯವಾಗಿರುವ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದರು.

ಸುತ್ತುಗೋಡೆ ನಿರ್ಮಿಸಿ: ಶಾಲಾ ಮಕ್ಕಳಿಗೆ ಸೈಕಲ್‌ಗ‌ಳನ್ನು ಇದೇ ತಿಂಗಳೊಳಗೆ ವಿತರಿಸಬೇಕು. ಶಾಲಾ ಆವರಣದಲ್ಲಿ ಸುರಕ್ಷಿತ ಆಟದ ಮೈದಾನ ಮತ್ತು ಸಹಾಯವಾಣಿ ಸಂಖ್ಯೆಯ ಬೋರ್ಡ್‌ಗಳನ್ನು ಅಳವಡಿಸಬೇಕು. ನರೇಗಾ ಯೋಜನೆಯಡಿ ಶಾಲೆಗಳಿಗೆ ಶೌಚಾಲಯ ಹಾಗೂ ಸುತ್ತುಗೋಡೆ ನಿರ್ಮಿಸಿ ಎಂದು ತಿಳಿಸಿದರು.

Advertisement

ಸಮರ್ಪಕವಾಗಿ ಸಸಿಗಳ ವಿತರಣೆ: ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರವನ್ನು ನೀಡಬೇಕು ಎಂದ ಸಿಇಒ, ತೋಟಗಾರಿಕೆ ಇಲಾಖೆವತಿಯಿಂದ ಬಡ ರೈತರಿಗೆ ಸಮರ್ಪಕವಾಗಿ ಸಸಿಗಳ ವಿತರಣೆ ಮಾಡಲು ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಾತನಾಡಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ರಾತ್ರಿಯ ವೇಳೆಯಲ್ಲೂ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

7 ಪ್ರಕರಣ ದಾಖಲು: ಜಿಲ್ಲೆಯಲ್ಲಿ ಕಳೆದ ವರ್ಷ 22 ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಆದರೆ ಈ ವರ್ಷ 7 ಪ್ರಕರಣಗಳು ದಾಖಲಾಗಿವೆ. ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಇಲಾಖೆಯಲ್ಲಿ 2.16 ಕೋಟಿ ರೂ. ಅನುದಾನವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಹೊನ್ನೇಗೌಡ ತಿಳಿಸಿದರು.

ಅಧಿಕಾರಿಗಳಿಂದ ಮಾಹಿತಿ: ಗುಂಡ್ಲುಪೇಟೆಯಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ಇಲಾಖೆ ಯಿಂದ 75 ಸಾವಿರ ರೂ. ಪರಿಹಾರ ನೀಡಲಾಗಿದೆ. 36 ಸಾವಿರ ರೂ. ವೈದ್ಯಕೀಯ ವೆಚ್ಚ ಭರಿಸಲಾಗಿದೆ. ಇಲಾಖೆ ವ್ಯಾಪ್ತಿಗೆ ಒಳಪಡುವ 4 ಶಾಲೆಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫ‌ಲಿತಾಂಶ ಪಡೆದಿವೆ. ಉಳಿದಂತೆ ಶೇ.50ಕ್ಕಿಂತ ಕಡಿಮೆ ಫ‌ಲಿತಾಂಶ ಪಡೆದಿರುವ 5 ಶಾಲೆಗಳು ಇವೆ ಎಂದರು.

ಉತ್ತಮ ಫ‌ಲಿತಾಂಶದ ಯೋಜನೆ ರೂಪಿಸಿ: ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಲತಾಕುಮಾರಿ, ಶೇ.50ಕ್ಕಿಂತ ಕಡಿಮೆ ಫ‌ಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್‌ ಕೊಡಿ. ಮುಂದಿನ ಸಾಲಿನಲ್ಲಿ ಇಲಾಖೆಯ ಎಲ್ಲ ಶಾಲೆಗಳು ಶೇ.100 ರಷ್ಟು ಫ‌ಲಿತಾಂಶ ಪಡೆಯಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಹಾಸ್ಟೆಲ್‌ಗ‌ಳಲ್ಲಿ ಶೇ.50 ರಷ್ಟು ಸೀಟುಗಳು ಭರ್ತಿ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಇಲಾಖೆಗೆ ಒಳಪಡುವ ಹಾಸ್ಟೆಲ್‌ಗ‌ಳಲ್ಲಿ ಶೇ.50 ರಷ್ಟು ಸೀಟುಗಳು ಭರ್ತಿಯಾಗದೆ ಖಾಲಿ ಇವೆ. 2500 ಸೀಟುಗಳಲ್ಲಿ 1180 ಸೀಟುಗಳು ಮಾತ್ರ ಭರ್ತಿಯಾಗಿವೆ. ಉಳಿದ 1320 ಸೀಟುಗಳು ಖಾಲಿ ಇವೆ. ಹೋಬಳಿಗಳಲ್ಲಿ ಪ್ರಾರಂಭವಾಗಿರುವ ವಸತಿ ಶಾಲೆಗಳು, ಬಿಸಿಯೂಟ, ಸೈಕಲ್‌ ವಿತರಣೆಯಿಂದಾಗಿ ಮಕ್ಕಳು ಹಾಸ್ಟೆಲ್‌ಗ‌ಳಿಗೆ ದಾಖಲಾಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಹಾಸ್ಟೆಲ್‌ಗ‌ಳಿಗೆ ಮಕ್ಕಳು ದಾಖಲಾಗುವಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆ ರೂಪಿಸಬೇಕು. ಪಾಲಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ‌ ಮಹೇಶ್‌, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೆನ್ನಪ್ಪ, ಉಮಾವತಿ, ಮರಗದ ಮಣಿ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next