ಬೆಂಗಳೂರು: ಕೋಟ್ಯಾಂತರ ರೂ. ಮೌಲ್ಯದ ಔಷಧಗಳನ್ನು ಸೂಕ್ತ ಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳದೇ ನಾಶ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕುರಿತು ಜೆಡಿಯು ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್, ಮಂಗಳವಾರ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
Advertisement
ಸರಕಾರಿ ಆಸ್ಪತ್ರೆಗಳಿಗೆ ಬರುವಂತಹ ರೋಗಿಗಳಿಗೆ ಔಷಧಗಳನ್ನು ನೀಡದೆ, ಗೋಡಾನ್‌ಗಳಲ್ಲಿ ದಾಸ್ತಾನು ಇಟ್ಟುಕೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಬಳಿಕ ಸಹಜವಾಗಿಯೇ ಬಳಸುವ ಅವಧಿ ಮುಗಿದಿದ್ದರಿಂದ 49,1668 ಕೆ.ಜಿ. ಔಷಧಗಳನ್ನು ನಾಶ ಮಾಡಿದ್ದಾರೆ. ಈ ಕಾರ್ಯಕ್ಕೆ 63 ಲಕ್ಷ ರೂ.ಗಳನ್ನು ಖಾಸಗಿ ಕಂಪೆನಿಗಳಿಗೆ ಪಾವತಿಸಿದ್ದಾರೆ. ಆದರೆ ನಿಗದಿತ ಅವಧಿಯೊಳಗಡೆ ಔಷಧಗಳನ್ನು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ನೀಡಿದ್ದರೆ ಈ ರೀತಿ ನಾಶಪಡಿಸುವ ಅಗತ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಕರ್ತವ್ಯಲೋಪ ಹಾಗೂ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ಕೋರಲಾಗಿದೆ.