ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ 11 ಕಾಂಗ್ರೆಸ್ ಹಾಗೂ 3 ಜೆಡಿಎಸ್ ಶಾಸಕರ ವಿರುದ್ಧ ಸಂವಿಧಾನದ ಶೆಡ್ನೂಲ್ 10 ಇದರ ಸೆಕ್ಷನ್ 2(1)(ಎ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 9ರ ಪ್ರಕಾರ ಕ್ರಮ ಜರುಗಿಸಿ “ವಜಾ ಪ್ರಮಾಣಪತ್ರ’ ನೀಡುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ
ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಎಂಬುವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಈ ದೂರು ಸಲ್ಲಿಸಿದ್ದು, ರಾಜೀನಾಮೆ ಕೊಟ್ಟಿರುವ 14 ಶಾಸಕರಿಗೆ ಆಯೋಗದಿಂದ ನೀಡಿರುವ “ಅರ್ಹತಾ ಪ್ರಮಾಣಪತ್ರ’ವನ್ನು ಅನೂರ್ಜಿತಗೊಳಿಸಿ, ವಜಾ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರಾಜೀನಾಮೆ ಕೊಟ್ಟಿರುವ ಶಾಸಕರು ಸದ್ಯ ಜನಪ್ರತಿನಿಧಿಗಳಾಗಿ ಉಳಿದಿಲ್ಲ. ಈಗ ಅವರೆಲ್ಲ ಸಾಮಾನ್ಯ ವ್ಯಕ್ತಿಗಳಾಗಿದ್ದಾರೆ. ಅಲ್ಲದೇ ದೇಶದ್ರೋಹಿಗಳು ಮತ್ತು ಕ್ರಿಮಿನಲ್‌ಗಳಾಗಿದ್ದಾರೆ. ಜನರ ಒಪ್ಪಿಗೆ ಮತ್ತು ಇಚ್ಛೆಯಿಂದ ಚುನಾಯಿತರಾಗಿದ್ದ ಇವರು, ರಾಜೀನಾಮೆ ಕೊಡುವಾಗ ತಮ್ಮನ್ನು ಆಯ್ಕೆ ಮಾಡಿದ ಜನರ ಅಭಿಪ್ರಾಯ ಪಡೆದುಕೊಂಡಿಲ್ಲ. ಜನರ ವಿಶ್ವಾಸ ಕಳೆದುಕೊಂಡಿರುವ ಮತ್ತು ಅವರಿಗೆ ವಿಶ್ವಾಸದ್ರೋಹ ಎಸಗಿದ ಈ ಶಾಸಕರು ಜನಪ್ರತಿನಿಧಿಯಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಜನರ ಬಹುಮತ, ಸಂವಿಧಾನ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂ ಸಿರುವ ಈ ಶಾಸಕರು ಮತ್ತು ಅವರ ಕುಟುಂಬದ ನಾಲ್ಕು ತಲೆಮಾರುಗಳಿಗೆ 5 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಹಾಗೂ ಶಾಸಕರಾಗಿ ಪಡೆದುಕೊಳ್ಳುತ್ತಿರುವ ವೇತನ, ಭತ್ಯೆ ಹಾಗೂ ಎಲ್ಲ ರೀತಿಯ ಸೌಲಭ್ಯಗಳನ್ನು ತಕ್ಷಣದಿಂದ ತಡೆಹಿಡಿಯಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.