Advertisement

ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು-ಪ್ರತಿದೂರು

02:32 AM Jun 13, 2019 | Team Udayavani |

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲೀಗ ದೂರು-ಪ್ರತಿದೂರುಗಳದ್ದೇ ಸದ್ದು!

Advertisement

ಲೋಕಸಭೆ ಚುನಾವಣಾ ಫ‌ಲಿತಾಂಶಕ್ಕೂ ಮುನ್ನವೇ, ರಾಜ್ಯ ನಾಯಕರು, ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಕೆಂಡಕಾರಿದ ರೋಷನ್‌ ಬೇಗ್‌ ಅವರು, ಗುಲಾಂ ನಬಿ ಆಜಾದ್‌ ಮತ್ತು ಅಹ್ಮದ್‌ ಪಟೇಲ್ರನ್ನು ಭೇಟಿಯಾಗಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು, ಪಕ್ಷದ ನಾಯಕರ ವಿರುದ್ಧ ಮಾತನಾಡಿರುವ ರೋಷನ್‌ ಬೇಗ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ.

ಬೇಗ್‌ ದೂರೇನು?: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಎಲ್ಲವನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಬೇರೆ ನಾಯಕರಿಗೆ ಪಕ್ಷದಲ್ಲಿ ಗೌರವ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ. ನಾನೇ ಎನ್ನುವ ಅಹಂ ಅವರಿಗಿದೆ. ಎಲ್ಲವೂ ನಾನು ಹೇಳಿದಂತೆ ನಡೆಯಬೇಕು. ನಾನು ತೆಗೆದುಕೊಂಡ ನಿರ್ಧಾರವೇ ಅಂತಿಮ ಎನ್ನುವ ಭಾವನೆ ಇದೆ. ಹೀಗಾಗಿ, ಪಕ್ಷದಲ್ಲಿ ಬೇರೆ ನಾಯಕರಿಗೆ ಗೌರವ ಇಲ್ಲದಂತಾಗಿದೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪಾಗುವಂತಾಗಿದೆ. ಸಮ್ಮಿಶ್ರ ಸರ್ಕಾರವನ್ನು ಸರಿಯಾಗಿ ನಡೆಸಲು ಬಿಡುತ್ತಿಲ್ಲ. ಸಮನ್ವಯ ಸಮಿತಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡೂ ಹುದ್ದೆಗಳನ್ನು ಹೊಂದಿರುವುದರಿಂದ ಸರ್ಕಾರವೂ ತಮ್ಮ ಆಶಯದಂತೆ ನಡೆಯಬೇಕೆಂದು ಬಯಸುತ್ತಾರೆ. ಇದರಿಂದ ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆ ಮೂಡುವ ಬದಲು ಗೊಂದಲ ಹೆಚ್ಚಾಗುತ್ತಿದೆ.

ನನಗೆ ಪಕ್ಷ ಹಾಗೂ ವರಿಷ್ಠರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಅವರೊಬ್ಬರ ಕೈಯಲ್ಲಿ ಸಿಕ್ಕಿಕೊಂಡಂತಾಗಿದೆ. ಈ ಬಗ್ಗೆ ಹೈಕಮಾಂಡ್‌ ಗಮನ ಹರಿಸಬೇಕು. ಕರ್ನಾಟಕದ ಸಮಸ್ಯೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ರೋಷನ್‌ ಬೇಗ್‌ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next