Advertisement

ರಮೇಶ್‌ ಕುಮಾರ್‌ ವಿರುದ್ಧ ಆಯೋಗಕ್ಕೆ ದೂರು

09:50 AM Nov 30, 2019 | Team Udayavani |

ಬೆಂಗಳೂರು: ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಆಕ್ಷೇಪಾರ್ಹ ಆರೋಪ ಮಾಡುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ಹೇಳಿಕೆ ನೀಡದಂತೆ ನಿರ್ದೇಶ ಕೊಡಬೇಕು ಎಂದು ಕೋರಿ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ನೇತೃತ್ವದ ನಿಯೋಗ ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಮೈತ್ರಿ ಸರಕಾರದ ಅವಧಿಯಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ರಮೇಶ್‌ ಕುಮಾರ್‌ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ, ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ 13 ಅಭ್ಯರ್ಥಿಗಳು ಅನರ್ಹರು, ನಾಲಾಯಕ್‌ಗಳು. ಅವರು ಗೆದ್ದರೆ ಸಂವಿಧಾನಕ್ಕೆ ಅಪಮಾನ ಎಂಬ ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಗವಾಡದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್‌ ಬಗ್ಗೆ ಅವರ ಬಗ್ಗೆಯೂ ರಮೇಶ್‌ ಕುಮಾರ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. 13 ಅಭ್ಯರ್ಥಿಗಳು ಅನರ್ಹರು, ನಾಲಾಯಕ್‌ಗಳಾಗಿದ್ದು, ಅವರು ಪಾದರಕ್ಷೆ ಬಿಡುವ ಸ್ಥಳದಲ್ಲಿಡಲು ಯೋಗ್ಯ ಎಂದು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸಭಾಧ್ಯಕ್ಷರಾಗಿದ್ದ ರಮೇಶ್‌ ಕುಮಾರ್‌ ಅವರು ಶಾಸಕರನ್ನು ಅನರ್ಹರೆಂದು ಪ್ರಕಟಿಸಿ ಪ್ರಸಕ್ತ ವಿಧಾನಸಭೆ ಅವಧಿಗೆ ಸ್ಪರ್ಧಿಸಲು ಅವಕಾಶವಿಲ್ಲದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಿದೆ. ಈ ಎಲ್ಲ ಸಂಗತಿಗಳನ್ನು ಗಮನಿಸಿ ರಮೇಶ್‌ ಕುಮಾರ್‌ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಇನ್ನು ಮುಂದೆ ಇಂಥ ಹೇಳಿಕೆಗಳನ್ನು ನೀಡದಂತೆ ನಿರ್ದೇಶ ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next