ಬೆಂಗಳೂರು: ಉದ್ಯೋಗ ಸಂದರ್ಶನ ಹಾಗೂ ಕಚೇರಿಯ ಇತರ ಕೆಲಸಗಳಿಗೆ ರಾಜ್ಯದ ಬೇರೆ, ಬೇರೆ ಕಡೆಗಳಿಂದ ಬರುವವರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕೇಂದ್ರ ಕಚೇರಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ವಕೀಲೆ ಸುಧಾ ಕಾಟವಾ ಈ ದೂರು ನೀಡಿದ್ದು, ಈ ಸಂಬಂಧ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಸಂದರ್ಶನ, ದಾಖಲಾತಿ ಪರಿಶೀಲನೆ ಸೇರಿದಂತೆ ಇತರ ಕಾರ್ಯಗಳಿಗೆ ಉದ್ಯೋಗಾಕಾಂಕ್ಷಿಗಳು ರಾಜ್ಯದ ಮೂಲೆ, ಮೂಲೆಗಳಿಂದ ಪ್ರತಿನಿತ್ಯ ಕೆಪಿಎಸ್‌ಸಿ ಕಚೇರಿಗೆ ಭೇಟಿ ನೀಡುತ್ತಾರೆ. ಇದರಲ್ಲಿ ಮಹಿಳೆಯರು ವಿಶೇಷವಾಗಿ, ಹಾಲುಣಿಸುವ ತಾಯಂದಿರು ಇರುತ್ತಾರೆ. ಕೆಪಿಎಸ್‌ಸಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿಲ್ಲ. ಅಷ್ಟೇ ಅಲ್ಲ, ಕುಡಿಯುವ ನೀರು, ಆಸನ, ಶೌಚಾಲಯದ ವ್ಯವಸ್ಥೆ ಇಲ್ಲ.
ಹೀಗಾಗಿ, ಸಂದರ್ಶನ ಮುಗಿಯುವವರೆಗೂ ಅಭ್ಯರ್ಥಿಗಳು ಮತ್ತು ಅವರೊಂದಿಗೆ ಬಂದವರು ಕಚೇರಿಯ ಹೊರಗೆ ಪಾದಚಾರಿ ಮಾರ್ಗದಲ್ಲೇ ಇರಬೇಕಾಗುತ್ತದೆ. ತಾಯಂದಿರು ಹಸುಗೂಸುಗಳಿಗೆ ಪಾದಚಾರಿ ಮಾರ್ಗದಲ್ಲೇ ಹಾಲುಣಿಸಬೇಕಾದ ಸ್ಥಿತಿಯಿದ್ದು, ಮುಜುಗರ ಅನುಭವಿಸುವಂತಾಗಿದೆ.
ಶೌಚಾಲಯದ ವ್ಯವಸ್ಥೆ ಇಲ್ಲದೇ ಹೆಣ್ಣು ಮಕ್ಕಳು ಇನ್ನಿಲ್ಲದ ತೊಂದರೆ ಎದುರಿಸಬೇಕಾಗುತ್ತದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.