Advertisement

ಖಾಕಿ ಲಂಚಾವತಾರದ ಬಗ್ಗೆ ಎಸಿಬಿಗೆ ದೂರು

06:30 PM Jul 21, 2022 | Team Udayavani |

ಚನ್ನರಾಯಪಟ್ಟಣ: ಅಂಬೇಡ್ಕರ್‌ ಭವನದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ದಳದ ಜನ ಸಂಪರ್ಕ ಸಭೆ ಯಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧವೇ ಹೆಚ್ಚು ದೂರುಗಳು ಎಸಿಬಿಗೆ ನೀಡಿದರು.

Advertisement

ಕಸಾಪ ತಾಲೂಕು ಅಧ್ಯಕ್ಷ ಎಚ್‌.ಎನ್‌.ಲೋಕೇಶ್‌ ಮಾತನಾಡಿ, ರೈತರು ಟ್ರ್ಯಾಕ್ಟರ್‌ನಲ್ಲಿ ಬೋಡ್ರಸ್‌ ಕಲ್ಲು ಹಾಗೂ ಎಂ ಸ್ಯಾಂಡ್‌ ಸರಬರಾಜು ಮಾಡುತ್ತಾರೆ. ಇವರಿಂದ ಇಂತಿಷ್ಟು ಎಂದು ಮಾಸಿಕ ಲಂಚವನ್ನು ನಿಗದಿ ಮಾಡಿದ್ದು ಸಕಾಲಕ್ಕೆ ಪೊಲೀಸರ ಕೈ ಸೇರುತ್ತಿದೆ. ಆದರೂ ರಸ್ತೆಯಲ್ಲಿ ವಾಹನ ತಡೆದು ಹಣ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಿಮೆ ಬದಲಾವಣೆಗೆ ಖಾಕಿ ಲಂಚ: ಒಕ್ಕಲಿಗ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್‌ ಮಾತನಾಡಿ, ಬೈಕ್‌ ಅಪಘಾತದಲ್ಲಿ ಬೈಕ್‌ ವಿಮೆ ಇರಲಿಲ್ಲ. ವಿಮೆ ಇರುವ ಬೈಕ್‌ ಬದಲಿ ಮಾಡುತ್ತೇನೆ. 50 ಸಾವಿರ ಹಣ ಕೊಡಿ ಎಂದು ನಗರ ಠಾಣೆ ಪಿಐ ಒಬ್ಬರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಎಸಿಬಿ ತನಖೆಗೆ ಆಗ್ರಹಿಸಿದರು.

ರಾಜಿ ಪಂಚಾಯ್ತಿಗೆ ಒತ್ತಡ: ಬಾಗೂರು ಕಾರೇಹಳ್ಳಿ ಗ್ರಾಮದ ಹರೀಶ್‌ ಮಾತನಾಡಿ, ಗ್ರಾಮದಲ್ಲಿ ಪ್ರಭಾವಿಗಳು ನನ್ನ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಪತ್ನಿ ಮೂಳೆ ಮುರಿದು ಆಸ್ಪತ್ರೆ ದಾಖಲಾಗಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಿದರೇ ಆರೋಪಿಗಳೊಡನೆ ರಾಜಿ ಪಂಚಾಯ್ತಿ ಮಾಡಿಕೊಳ್ಳುವಂತೆ ನುಗ್ಗೇಹಳ್ಳಿ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

ನೇಪಮಾತ್ರಕಿದೆ ಎಸಿಬಿ: ಆರ್‌ಟಿಐ ಕಾರ್ಯಕರ್ತ ಹರೀಶ್‌ ಮಾತನಾಡಿ, ಕುಂದೂರು ಗ್ರಾಪನಲ್ಲಿ 200 ಮೀ.ಕಾಮಗಾರಿ ಮಾಡಿ 3 ಸಾವಿರ ಮೀ.ಕೆಲಸ ಮಾಡಿರುವುದಾಗಿ ಬಿಲ್‌ ಪಡೆದಿದ್ದಾರೆ. ಎಸಿಬಿಗೆ ಈ ಬಗ್ಗೆ ದೂರು ನೀಡಿದರು ತನಿಖೆ ಮಾಡಿಲ್ಲ ಎಸಿಬಿ ನೆಪ ಮಾತ್ರಕ್ಕೆ ಇದೆ ಎಂದು ದೂರಿದರು.

Advertisement

ಇಂಧನ ಇಲಾಖೆ ಕರ್ಮಕಾಂಡ: ದಂಡೋರ ಮಂಜುನಾಥ್‌ ಮಾತನಾಡಿ, ಬಾಗೂರು ಗ್ರಾಪಂ 14 ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ಸಮೇತ ಇಒಗೆ ದೂರು ನೀಡಿದರು ಯಾವುದೆ ಪ್ರಯೋಜವಾಗಿಲ್ಲ ಎಂದಾಗ ಸಭೆಯಲ್ಲಿ ಹಾಜರಿದ್ದ ಇಒ ಸುನಿಲ್‌ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ಅಕ್ರಮ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಎಂಪ್ಲಾಯ್‌ ಕಾರ್ಡ್‌ಗೆ 2 ಸಾವಿರ ರೂ.ವಸೂಲಿ: ಕುರುವಂಕ ಮಂಜು ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಗುರುತಿನ ಚೀಟಿ ಪಡೆಯಲು ಎರಡು ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ. ಕಾರ್ಮಿಕ ನಿರೀಕ್ಷಕರು ದಲ್ಲಾಳಿ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದಾಗ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಮಿಕ ನಿರೀಕ್ಷ ಪುರುಷೋತಮ್‌ ಮಾತನಾಡಿ, ಕಚೇರಿಯಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ, ಕಂಪ್ಯೂಟರ್‌ ಕೇಂದ್ರಗಳಲ್ಲಿ ಹಣ ಪಡೆಯುವುದಕ್ಕೆ ನಾನು ಹೊಣೆಗಾರನಲ್ಲ ಎಂದರು. ಎಸಿಬಿ ಹಾಸನ ಡಿವೈಎಸ್‌ಪಿ ಸತೀಶ್‌, ಎಸ್‌ಐ ಶಿಲ್ಪಾ, ವಿವಿಧ ಇಲಾಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಒಮ್ಮೆ ದಾಳಿ ಮಾಡಿ
ಪುರಸಭೆ ನಾಮ ನಿರ್ದೇಶನ ಸದಸ್ಯ ನಂಜುಂಡ ಮೈಮ್‌ ಮಾತನಾಡಿ, ಉಪನೋಂದಾವಣಿ ಕಚೇರಿಯಲ್ಲಿ ನಿತ್ಯವೂ ಹಣದ ಹೊಳೆ ಹರಿಯುತ್ತಿದೆ. ಇದರಿಂದ ಇಲಾಖೆ ಅಧಿಕಾರಿಗಳು ಜೇಬು ತುಂಬುತ್ತಿದೆ. ಆಸ್ತಿ ಮಾರಾಟ ಮಾಡುವವರ ಪಾಡು ಹೇಳತೀರದಾಗಿದೆ. ಕಚೇಗೆ ಸಿಸಿ ಕ್ಯಾಮರ ಹಾಕಿಸಿಲ್ಲ. ಇಲ್ಲಿ ದಲ್ಲಾ ಳಿಗಳ ಅಡ್ಡೆ ಇದೆ. ದಯಮಾಡಿ ಎಸಿಬಿ ಅಧಿಕಾರಿಗಳು ಉಪನೋಂದಾವಣಿ ಇಲಾಖೆಗೆ ಮಾಹಿತಿ ನೀಡದೆ ದಾಳಿ ಮಾಡಿದರೆ ಭ್ರಷ್ಟಾಚಾರ ಬಯಲಿಗೆ ತರಬಹುದು ಎಂದು ಹೇಳಿದರು.

ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ
ಭ್ರಷ್ಟಾಚಾರ ನಿಗ್ರಹ ದಳದ ದಕ್ಷಿಣ ವಲಯ ಎಸ್‌ಪಿ ವಿ.ಜೆ.ಸಜಿತ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲ ಬಾರಿಗೆ ಸಭೆ ನಡೆಯುತ್ತಿದೆ. ಹಾಗಾಗಿ ಕೆಲ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ಮುಂದೆ ಈ ರೀತಿ ಅಗದಂತೆ ನೋಡಿಕೊಳ್ಳಲಾಗುವುದು. ಸಭೆಯ ಗಮನಕ್ಕೆ ತಂದ ವಿಷಯ ಹಾಗೂ ಅರ್ಜಿ ನೀಡಿರುವುದನ್ನು ತನಿ ಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next