Advertisement

ಜನರಿಂದ ದೂರು ಸಲ್ಲಿಕೆ-ಅಹವಾಲು ಆಲಿಕೆ

05:44 PM Jun 19, 2022 | Team Udayavani |

ಮುಂಡಗೋಡ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲೂಕಿನ ಮಳಗಿ ಗ್ರಾಮದಲ್ಲಿ ಶನಿವಾರ ನಡೆಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಾರ್ವಜನಿಕರ ಮತ್ತು ಗ್ರಾಮಸ್ಥರ ಆಹವಾಲುಗಳನ್ನು ಆಲಿಸಿದರು.

Advertisement

ಜಿಲ್ಲಾಧಿಕಾರಿಗಳು ಮಳಗಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಕಾತೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಮತ್ತು ಜನದಟ್ಟಣೆ ಇರುವ ಸ್ಥಳದಲ್ಲಿ ಅನಧಿಕೃತವಾಗಿ ಮಾಂಸದ ಅಂಗಡಿ, ಮದ್ಯದ ಅಂಗಡಿಗಳು ಇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ ಎಂದು ಮಾಲತೇಶ ಜಾಡರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಕಲಿ ವೈದ್ಯರ ಬಗ್ಗೆ ತಹಶೀಲ್ದಾರ, ಆರೋಗ್ಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸುವಂತೆ ತಹಶೀಲ್ದಾರರಿಗೆ ಅನಧಿಕೃತ ಮಾಂಸದ ಅಂಗಡಿಯ ಬಗ್ಗೆ ತಾ.ಪಂ. ಇಒ ಅವರಿಗೆ ಪರಿಶೀಲಿಸುವಂತೆ ತಿಳಿಸಿದರು.

ಮಳಗಿಯಲ್ಲಿರುವ ಖಾಸಗಿ ಆಸ್ಪತ್ರೆ ಕುಟುಂಬ ಕಲಹದಿಂದ ಬಂದಾಗಿದ್ದು ಇದರಿಂದ ಸುತ್ತಮುತ್ತಲಿನ ಸಾರ್ವಜನಿಕರು ತೊಂದರೆ ಪಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಜಿಲ್ಲಾಧಿ ಕಾರಿಗಳು ಖಾಸಗಿ ಆಸ್ಪತ್ರೆ ಇರುವ ಕಾರಣ ಸಂಬಂಧಪಟ್ಟರಿಗೆ ದೂರು ನೀಡುವಂತೆ ಆಸ್ಪತ್ರೆ ಮಾಲೀಕರಿಗೆ ಸೂಚಿಸಿದರು.

ಮಳಗಿ ವ್ಯಾಪ್ತಿಯಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿವೆ. ಗ್ರಾಮದಲ್ಲಿ ಹೆಚ್ಚು ವಿದ್ಯುತ್‌ ವ್ಯತ್ಯಯವಾಗುವದರಿಂದ ಸೀಮೆ ಎಣ್ಣೆ ಇಲ್ಲದೆ ರಾತ್ರಿ ಸಮಯದಲ್ಲಿ ಪರದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಆದ ಕಾರಣ ಸೀಮೆಎಣ್ಣೆ ಪೂರೈಕೆ ಆಗುವಂತೆ ಮಾಡಿ ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿಗಳು ಈ ಸಮಸ್ಯೆ ರಾಜ್ಯಾದ್ಯಂತ ಇದ್ದು ಕೇಂದ್ರ ಸರ್ಕಾರ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುತ್ತದೆ ಎಂದರು.

Advertisement

ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ಕೇಳುತ್ತಾರೆ ಎಂದು ಗಮನಕ್ಕೆ ತಂದಾಗ ನಿಯಮದಂತೆ ಸರ್ಕಾರದ ದರಕ್ಕೆ ನೀಡಬೇಕು. ಈ ಬಗ್ಗೆ ವಿತರಕರ ಜೊತೆ ಮಾತನಾಡಲಾಗುವುದು. ಇದು ಮತ್ತೆ ಮರುಕಳಿಸಿದರೆ ಅವರ ಪರವಾನಿಗೆ ರದ್ದು ಪಡಿಸಲಾಗುವುದು ಎಂದರು.

ಮಳಗಿ ಗ್ರಾ.ಪಂ. ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಸಂಖ್ಯೆ ಇದ್ದು ದೂರ ದೂರು ಗ್ರಾಮಗಳಿಂದ ಮಳಗಿ ಸೊಸೈಟಿ ಗ್ರಾಮಕ್ಕೆ ಬಂದು ರೇಷನ್‌ ಪಡೆಯಬೇಕಾಗಿದೆ. ಆದ ಕಾರಣ ಇದನ್ನು ವಿಂಗಡನೆ ಮಾಡಿ ಸೊಸೈಟಿಯಿಂದಲೇ ನೀಡುವ ಹಾಗೆ ಮೂರು ಭಾಗ ಮಾಡಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ರೇಖಾ ಅಂಡಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ 63 ಜನರಿಗೆ ಮಾಸಾಶನ ಮಂಜೂರಿ ಆದೇಶ ಪತ್ರ ವಿತರಿಸಲಾಯಿತು. ಅಲ್ಲದೇ ಹಲೋ ಕಂದಾಯದ ಹೆಸರಿನಲ್ಲಿ ಮಾಸಾಶನ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದ್ದರೆ 155245 ಕ್ಕೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿದರೆ 72 ಘಂಟೆಯ ಒಳಗೆ ಬಗೆಹರಿಸಲಾಗುವುದು ಎಂದು ಡಿಸಿ ತಿಳಿಸಿದರು.

ಒಟ್ಟೂ 186 ದೂರುಗಳು ಬಂದಿದ್ದವು. ಬಸ್ಸಿನ ತೊಂದರೆ, ಸ್ಮಶಾನ, ಜಮೀನಿನ ವಿಷಯಕ್ಕೆ ಹೀಗೆ ಹಲವು ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಬಳಿಕ ಎಸ್ಸಿ ಎಸ್ಟಿ ಕಾಲೋನಿ, ಅಂಗನವಾಡಿ ಕೇಂದ್ರ ಧರ್ಮಶಾಲೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿವ ವರ್ಗಗಳ ವಸತಿ ನಿಲಯಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಶಿರಶಿಯ ಎಸಿ ಆರ್‌ ದೇವರಾಜ, ತಹಶೀಲ್ದಾರ ಶ್ರೀಧರ ಮುಂದಲಮನಿ, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next