Advertisement

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

12:35 AM Nov 06, 2024 | Team Udayavani |

ಬೆಂಗಳೂರು: ವಿಧಾನಸಭಾ ಉಪ ಸಮರದ ಹೊಸ್ತಿಲಿನಲ್ಲಿ ವಕ್ಫ್ ಆಸ್ತಿ ವಿಷಯವು ಸೃಷ್ಟಿಸಿದ ಕೋಲಾಹಲ ಕಾಂಗ್ರೆಸ್‌ ಪಾಳಯಕ್ಕೆ ಈಗ ನುಂಗಲಾರದ ತುತ್ತಾಗಿದ್ದು, ಇಡೀ ವಿವಾದದ ಕೇಂದ್ರ ಬಿಂದು ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಮುಗಿಬಿದ್ದಿದ್ದಾರೆ. ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

Advertisement

ಎಲ್ಲವೂ ಸುಸೂತ್ರ ವಾಗಿ ನಡೆಯುತ್ತಿರು ವಾಗ ವಕ್ಫ್ ವಿಚಾರ ಬೇಕಿರಲಿಲ್ಲ. ಒಬ್ಬ ಸಚಿವರ ಹೇಳಿಕೆಗೆ ಇಡೀ ಪಕ್ಷ ಮತ್ತು ಸರಕಾರ ಸಮಜಾಯಿಷಿ ಕೊಡುವ ಸ್ಥಿತಿ ಬಂದಿದೆ. ಜಮೀರ್‌ ಅಹ್ಮದ್‌ ಆಗಾಗ ಈ ರೀತಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಲೇ ಇದ್ದಾರೆ. ಕೂಡಲೇ ಅವರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲ ವಾದರೆ ಪಕ್ಷ ಭಾರೀ ಬೆಲೆ ತೆರ ಬೇಕಾಗು ತ್ತದೆ ಎಂಬ ಎಚ್ಚರಿಕೆ ಸಹಿತ ದೂರನ್ನು ಕಾಂಗ್ರೆಸ್‌ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದಾರೆ.

ಈ ಸಂಬಂಧ ಮೊದಲ ಬಾರಿಗೆ ಆಯ್ಕೆಯಾಗಿರುವ ಒಕ್ಕಲಿಗ, ಲಿಂಗಾಯತ ಮತ್ತು ದಲಿತ ಸಮುದಾಯದ 23ಕ್ಕೂ ಅಧಿಕ ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಅವರ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಪಕ್ಷಕ್ಕೆ ಆಗುವ ಮುಜುಗರ ವನ್ನು ತಪ್ಪಿಸಬೇಕು. ಇದಕ್ಕಾಗಿ ಕೂಡಲೇ ತಾವು ಮಧ್ಯಪ್ರವೇಶಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ?
ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಇತ್ತೀಚೆಗೆ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಸರಕಾರ ಹಾಗೂ ಪಕ್ಷಕ್ಕೆ ತೀವ್ರತರಹದ ಹಾನಿ ಯಾಗುತ್ತಿದೆ. ಅದರಲ್ಲೂ ವಕ್ಫ್ ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕ ವಿಷಯಗಳನ್ನು ಹೇಳುವ ಮೂಲಕ ಅನಗತ್ಯ ಗೊಂದಲ ಗಳನ್ನು ಸೃಷ್ಟಿ ಮಾಡುತ್ತ ಬರುತ್ತಿದ್ದಾರೆ. ಇಂದು ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ. ಇದು ಜನಸಾಮಾನ್ಯರ ಮನಸ್ಸು ಗೆದ್ದಿದೆ. ಇಷ್ಟೆಲ್ಲ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಸರಕಾರಕ್ಕೆ ಇಂತಹ ಹೇಳಿಕೆಗಳು ಸಾರ್ವಜನಿಕ ವಲಯಗಳಲ್ಲಿ ಮುಜುಗರ ಉಂಟು ಮಾಡುತ್ತಿದೆ. ಜತೆಗೆ ನಾಗರಿಕರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಇತ್ತೀಚೆಗೆ ಶಿಗ್ಗಾಂವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯವಾಗಿ ಕೂಡ ಅನಗತ್ಯ ಗೊಂದಲ ಗಳನ್ನು ಸೃಷ್ಟಿ ಮಾಡಿದ್ದರು.

ಎಲ್ಲರೂ ಒಂದು:
ಇವರೊಬ್ಬರು ಭಿನ್ನ!
ರಾಜ್ಯದಲ್ಲಿ ಅನೇಕ ಹಿರಿಯ ಅಲ್ಪಸಂಖ್ಯಾಕ ಶಾಸಕರಿದ್ದಾರೆ. ಅವರೆಲ್ಲರೂ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಇವರೊಬ್ಬರೇ ವಿಶೇಷ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶಿಸಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಭಾರೀ ಬೆಲೆ ತರಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಶಾಸಕರು ಮತ್ತು ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಪತ್ರದಲ್ಲಿ ವಿವರಿಸಿದ್ದಾರೆ.

Advertisement

ದೂರಿನಲ್ಲೇನಿದೆ?
-ರಾಜ್ಯದಲ್ಲಿ ಎಲ್ಲವೂ ಸುಸೂತ್ರ ವಾಗಿರುವಾಗ ವಕ್ಫ್ ವಿಚಾರ ಬೇಕಿರಲಿಲ್ಲ
-ಒಬ್ಬ ಸಚಿವರ ಹೇಳಿಕೆಗೆ ಪಕ್ಷ, ಸರ ಕಾರ ಸಮಜಾಯಿಷಿ ಕೊಡುವ ಸ್ಥಿತಿ
-ಸಚಿವ ಜಮೀರ್‌ ಅಹ್ಮದ್‌ರಿಂದ ಆಗಾಗ ಪಕ್ಷಕ್ಕೆ ಭಾರೀ ಮುಜುಗರ
-ಕೂಡಲೇ ಸಚಿವ ಜಮೀರ್‌ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು
-ನಿಯಂತ್ರಣ ಹೇರದಿದ್ದರೆ ರಾಜ್ಯದಲ್ಲಿ ಪಕ್ಷ ಭಾರೀ ಬೆಲೆ ತೆರಬೇಕಾಗುತ್ತದೆ
-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಮಧ್ಯಪ್ರವೇಶಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next