ಕಲಬುರಗಿ: ಚುನಾವಣೆಗೆ ಸಂಬಂಧಿಸಿದಂತೆ ಸಭೆ-ಸಮಾರಂಭ ಮತ್ತು ವಾಸ್ತವಿಕ ವರದಿ ಮತ್ತು ಎಲ್ಲರ ಅಭಿಪ್ರಾಯ ಪಡೆದು ಸುದ್ದಿ ಮಾಡಿದಲ್ಲಿ ಅದು ಪೇಡ್ ನ್ಯೂಸ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಪೇಡ್ ನ್ಯೂಸ್ ಸಂಬಂಧ ಜಿಲ್ಲೆಯ ವಿವಿಧ ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕರ್ತರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸಿದಲ್ಲಿ ಅಂತಹ ಮಾಧ್ಯಮ ಸಂಸ್ಥೆಗಳ ವಿರುದ್ಧ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಿದೆ. ಪೇಡ್ ನ್ಯೂಸ್ ಪ್ರಕರಣದಲ್ಲಿ ಯಾರಾದರೂ ಸಹ ಸಮಿತಿಗೆ ದೂರು ಸಲ್ಲಿಸಲು ಅವಕಾಶ ಇದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಸುದ್ದಿ, ಏಕಪಕ್ಷೀಯವಾಗಿ ಸುದ್ದಿ ಪ್ರಸಾರ, ಪದೇ ಪದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಸುದ್ದಿಗಳನ್ನು ಪುನರಾವರ್ತಿಸಿದ್ದಲ್ಲಿ ಅದನ್ನು ಪೇಡ್ ನ್ಯೂಸ್ ಎಂದು ಪರಿಗಣಿಸಲಾಗುವುದು. ಆದರೆ ಜಿಲ್ಲಾ ಚುನಾವಣಾಧಿಕಾರಿಗಳು ಪೇಡ್ ನ್ಯೂಸ್ ಅಥವಾ ಅನಧಿಕೃತ ಜಾಹೀರಾತು ಎಂದು ನಿರ್ಧರಿಸಿದ್ದಲ್ಲಿ 96 ಗಂಟೆಯೊಳಗೆ ಸಂಬಂಧಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸ್ಪಷ್ಟೀಕರಣ ಕೋರಲಾಗುವುದು. ಇದಕ್ಕೆ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ 48 ಗಂಟೆ ಒಳಗೆ ಉತ್ತರ ನೀಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಮಾಧ್ಯಮ ಸಂಸ್ಥೆಗಳಿಗೂ ನೋಟಿಸ್ ನೀಡಿ ಉತ್ತರ ಪಡೆಯಲಾಗುವುದು ಎಂದು ಹೇಳಿದರು.
ಮುದ್ರಣ, ವಿದ್ಯುನ್ಮಾನ, ಸೋಷಿಯಲ್ ಮೀಡಿಯಾ ಮತ್ತು ಬಲ್ಕ್ ಎಸ್‌ಎಂಎಸ್ ಮೇಲೆ ನಿಗಾ ಇಡಲು ವಾರ್ತಾ ಇಲಾಖೆಯಲ್ಲಿ ಮೀಡಿಯಾ ಮಾನಿಟರಿಂಗ್ ಕಮಿಟಿ ಕಾರ್ಯನಿರ್ವಹಿಸಲಿದ್ದು, ಪ್ರತಿ ದಿನ ಪತ್ರಿಕೆ ಮತ್ತು ಸ್ಥಳೀಯ ಕೇಬಲ್ ವಾಹಿನಿಗಳು ಪ್ರಸಾರ ಮಾಡುವ ಕಾಸಿಗಾಗಿ ಸುದ್ದಿ ಕುರಿತು ಪೇಡ್ ನ್ಯೂಸ್ ಪರಿಶೀಲನಾ ಉಪ ಸಮಿತಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರುವುದು. ನಿಯಮಾನುಸಾರ ಪರಿಶೀಲನೆ ನಂತರ ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಸದರಿ ವೆಚ್ಚವನ್ನು ಆಯಾ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಕ್ಕೆ ಸೇರಿಸುವುದಲ್ಲದೆ ನಿಯಮಾನುಸಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾಹೀರಾತು ಪೂರ್ವಾನುಮತಿ ಉಪ ಸಮಿತಿ ರಚಿಸಲಾಗಿದೆ. ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ ಅಥವಾ ಸಂಸ್ಥೆ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಈ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಪಕ್ಷಗಳು ಮತ್ತು ಸ್ಪರ್ಧಾ ಅಭ್ಯರ್ಥಿಗಳ ಸಂದರ್ಭದಲ್ಲಿ ಜಾಹೀರಾತು ಪ್ರಕಟ ಅಥವಾ ಪ್ರಸಾರ ದಿನದಿಂದ 3 ದಿನಗಳ ಮುಂಚೆ ಮತ್ತು ಸಂಸ್ಥೆ ಅಥವಾ ಸಂಘಟನೆ ಸಂದರ್ಭದಲ್ಲಿ 7 ದಿನ ಮುಂಚೆ ಪೂರ್ವಾನುಮತಿಗೆ ನಿಗದಿತ ನಮೂನೆ ಅರ್ಜಿ ಹಾಗೂ ಎರಡು ಸೆಟ್ ಡಿ.ವಿ.ಡಿ.ಗಳನ್ನು ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಸಿ.ಎಂ.ಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿ ಇದನ್ನು ಪರಿಶೀಲಿಸಿ ಅಕ್ಷೇಪಣೆಗಳಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿ ಅನುಮತಿ ನೀಡುತ್ತದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ತುಳಜಾರಾಮ ಎಸ್. ಪವಾರ ಅವರು ಪಿ.ಪಿ.ಟಿ ಮೂಲಕ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ, ಪೇಡ್ ನ್ಯೂಸ್ ಉಪ ಸಮಿತಿ, ಜಾಹೀರಾತು ಪೂರ್ವಾನುಮತಿ ಕುರಿತು ಕಾರ್ಯವಿಧಾನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲೆಯ ವಿವಿಧ ಮುದ್ರಣ, ವಿದ್ಯುನ್ಮಾನ ಮಾಧ್ಯಮದವರು ಸಭೆಯಲ್ಲಿ ಭಾಗವಹಿಸಿದ್ದರು.