Advertisement
ಪ್ರಕರಣ ಸಂಬಂಧ ಅನಿತಾ (22) ಹಾಗೂ ಪ್ರಿಯಕರ ಮೈಸೂರು ಮೂಲದ ರೋಷನ್ (24) ಹಾಗೂ ಇವರಿಗೆ ಸಹಾಯ ಮಾಡಿದ ಚಾಮರಾಜನಗರದ ಸೋಮರಾಜ್ (27) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಫೆ.23ರಂದು ನಸುಕಿನ 1 ಗಂಟೆ ಸುಮಾರಿಗೆ ಪಾನೀಪುರಿ ವ್ಯಾಪಾರಿ ನರಸಿಂಹಮೂರ್ತಿಯನ್ನು ಕೊಂದಿದ್ದರು.
Related Articles
Advertisement
ಬಾಗಿಲು ತೆರೆದ ಅನಿತಾ: ಪತಿ ಹಲ್ಲೆ ನಡೆಸಿದ್ದರಿಂದ ನೊಂದಿದ್ದ ಅನಿತಾ, ರೋಷನ್‌ಗೆ ಈ ವಿಷಯ ತಿಳಿಸಿದ್ದಳು. 15 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಷನ್, ಅನಿತಾ ಜತೆ ಚರ್ಚಿಸಿ ನರಸಿಂಹಮೂರ್ತಿ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಶುಕ್ರವಾರ ನಸುಕಿನ 1 ಗಂಟೆ ಸುಮಾರಿಗೆ ಸ್ನೇಹಿತ ಸೋಮರಾಜನ ಜತೆ ಮಾರಕಾಸ್ತ್ರ ಹಿಡಿದು ಅನಿತಾಳ ಮನೆಗೆ ಬಂದಿದ್ದಾನೆ.
ಆಗ ಖುದ್ದು ಅನಿತಾ ಬಾಗಿಲು ತೆರೆದು ಆರೋಪಿಗಳನ್ನು ಒಳ ಕರೆದುಕೊಂಡಿದ್ದಾಳೆ. ಇದೇ ವೇಳೆ ಮದ್ಯ ಸೇವಿಸಿ ಗಾಢನಿದ್ರೆಯಲ್ಲಿದ್ದ ನರಸಿಂಹಮೂರ್ತಿಯ ಬಾಯಿ ಮುಚ್ಚಿದ್ದಾರೆ. ಅನಿತಾ ಆತನ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ರೋಷನ್ ಹಾಗೂ ಸೋಮರಾಜು ಮಾರಕಾಸ್ತ್ರಗಳಿಂದ ತಲೆ. ಕೈ, ಕಾಲಿಗೆ ತೀವ್ರ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ನಂತರ ಮನೆ ತುಂಬ ಸಿಡಿದಿದ್ದ ರಕ್ತವನ್ನು ಅನಿತಾ ಸ್ವತ್ಛಗೊಳಿಸಿದ್ದಾಳೆ. ಅಷ್ಟರಲ್ಲಿ ಮುಂಜಾನೆ 5 ಗಂಟೆಯಾಗಿದ್ದು, ನೆಲಮಹಡಿಯಲ್ಲಿರುವ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ. ಜತೆಗೆ ಸಾರ್ವಜನಿಕರು ವಾಕಿಂಗ್ ಹೋಗುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಶವ ಸಾಗಿಸುವುದು ಸರಿಯಲ್ಲ ಎಂದು ಅಲ್ಲೇ ಇದ್ದ ಟಾರ್ಪಲ್‌ನಲ್ಲಿ ಸುತ್ತಿ ಮಂಚದ ಕೆಳಗೆ ನೂಕಿದರು. ನಂತರ ರೋಷನ್ ಮತ್ತು ಸೋಮಶೇಖರ್ ಪರಾರಿಯಾಗಿದ್ದರು.
ರಾತ್ರಿಯಿಂದ ಪತಿ ಕಾಣಿಲ್ಲ!: ಬೆಳಗ್ಗೆ ಏಳು ಗಂಟೆ ಸುಮಾರಿಗೆ ತನ್ನ ಸಂಬಂಧಿಕರು ಹಾಗೂ ಅತ್ತೆ ಹನುಮಮ್ಮ ಅವರಿಗೆ ಕರೆ ಮಾಡಿದ ಅನಿತಾ, ಪತಿ ನರಸಿಂಹಮೂರ್ತಿ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾಳೆ. ಗಾಬರಿಗೊಂಡ ಹನುಮಮ್ಮ ಮಗನ ಮನೆಗೆ ಬಂದು ಹುಡುಕಾಡಿದಾಗ ಮಂಚದ ಕೆಳಗೆ ರಕ್ತದ ಕಲೆ ಕಂಡು ಪರಿಶೀಲಿಸಿದಾಗ ಟಾರ್ಪಲಿನ್‌ನಲ್ಲಿ ನರಸಿಂಹ ಮೂರ್ತಿ ಶವ ಪತ್ತೆಯಾಗಿತ್ತು. ಕೂಡಲೆ ಸೊಸೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಮೊದಲ ಪ್ರೇಮಿಯ ಎಳೆತಂದರು: ಆರೋಪಿ ಅನಿತಾಳನ್ನು ವಿಚಾರಣೆ ನಡೆಸಿದಾಗ ಮದುವೆಗೂ ಮುನ್ನ ತಾನು ಪ್ರೀತಿಸುತ್ತಿದ್ದ ಆಟೋ ಚಾಲಕ ಪ್ರವೀಣ್ ಕುಮಾರನ ಹೆಸರು ಹೇಳಿದ್ದಳು. ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಕೋಪಗೊಂಡು ಪ್ರವೀಣನೇ ಕೊಲೆ ಮಾಡಿದ ಎಂದು ಹೇಳಿಕೆ ದಾಖಲಿಸಿದ್ದಳು.
ರೋಷನ್ ವಿಚಾರ ಅರಿಯದ ಅತ್ತೆ ಹನುಮಮ್ಮ ಕೂಡ ಪ್ರವೀಣ್ ಹಾಗೂ ಅನಿತಾ ಒಮ್ಮೆ ಮನೆ ಬಿಟ್ಟು ಹೋಗಿದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಹೀಗಾಗಿ ಪೊಲೀಸರು ಪ್ರವೀಣ್‌ನನ್ನು ಎಳೆತಂದು ವಿಚಾರಣೆ ನಡೆಸಡಿದ್ದಾರೆ. ಆದರೆ ನಿತಾ ಹಾಗೂ ತನ್ನ ನಡುವೆ ಸಂಪರ್ಕ ಕಡಿತು ಹಲವು ವರ್ಷಗಳೇ ಕಳೆದಿವೆ ಎಂದು ಪ್ರವೀಣ್ ಹೇಳಿದ್ದ.
ಆಗ ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನಿತಾ, ರೋಷನ್ ಹೆಸರು ಬಾಯಿಬಿಟ್ಟಳು. ಕೂಡಲೇ ರೋಷನ್‌ನನ್ನು ಬಂಧಿಸಿದ್ದು, ಆತನೂ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯವೆಸಗಿದ ಬಳಿಕ ಇಬ್ಬರು ಮದುವೆಯಾಗಲು ತೀರ್ಮಾನಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.