Advertisement

ಮುಖ್ಯಮಂತ್ರಿ ವಿರುದ್ಧ ದೂರು

09:14 AM Oct 17, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸುವ ಮೂಲಕ ಬಿಜೆಪಿ ರಾಜಕೀಯ ಯುದ್ಧದ ಅಖಾಡಕ್ಕೆ ಇಳಿದಿದೆ. ಸುಪ್ರೀಂಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ನೀಡಿದರೂ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ಸುಮಾರು 6.26 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ರದ್ದಾಗಲು ಕಾರಣರಾಗುವ ಮೂಲಕ ಬಿಡಿಎ ಸುಮಾರು 300 ಕೋಟಿ ರೂ. ನಷ್ಟ ಅನುಭವಿಸುವಂತೆ ಮಾಡಿದ್ದಾರೆ ಎಂದು
ಆರೋಪಿಸಿ ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಬಿಜೆಪಿ ದೂರು ನೀಡಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಕಾನೂನು ಕೋಶದ ಅಧಿಕಾರಿ ಎರವಲ್‌ ಕಲ್ಪನಾ, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್‌ .ನರಸಿಂಹಮೂರ್ತಿ, ಬಿಡಿಎ ಆಯುಕ್ತರಾಗಿದ್ದ ಶ್ಯಾಂ ಭಟ್‌, ಬೆಂಗಳೂರು ಉತ್ತರ ತಾಲೂಕು ವಿಶೇಷ ತಹಸೀಲ್ದಾರ್‌, ಶಾಸಕ ವಸಂತ ಬಂಗೇರ, ಹೈಕೋರ್ಟ್‌ನಲ್ಲಿ ಅರ್ಜಿದಾರ ರಾಗಿದ್ದ ಕೆ.ವಿ.ಜಯಲಕ್ಷ್ಮಮ್ಮ, ಎಸ್‌.ಎನ್‌.ವಿಜಯಲಕ್ಷ್ಮಿ, ಕೆ.ವಿ.ಪ್ರಭಾಕರ್‌ ಮತ್ತು ಅವರಿಂದ ಜಿಪಿಎ ಪಡೆದಿರುವ
ಕೀರ್ತಿರಾಜ್‌ ಶೆಟ್ಟಿ ಎಂಬುವರ ವಿರುದ್ಧ ಬಿಜೆಪಿ ಪರವಾಗಿ ಬಿಬಿಎಂಪಿ ಮಾಜಿ ಸದಸ್ಯ ಎನ್‌.ಆರ್‌.ರಮೇಶ್‌ ಸೋಮವಾರ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಇವರ ವಿರುದ್ಧ ಐಪಿಸಿ 420 (ವಂಚನೆ), 465 (ಫೋರ್ಜರಿ), 468 (ವಂಚನೆ ದೃಷ್ಟಿಯಿಂದ ಫೋರ್ಜರಿ)
ಮತ್ತು 120 ಬಿ (ಕ್ರಿಮಿನಲ್‌ ಪಿತೂರಿ), ಲಂಚ ನಿರೋಧ ಕಾಯ್ದೆ ಮತ್ತು ಬೇನಾಮಿ ಆಸ್ತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ದೂರಿಗೂ ಮುನ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ 
ಎಸಿಬಿಯಲ್ಲಿ ದೂರು ದಾಖಲಿಸುವ ಮುನ್ನ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವಿಧಾನ ಪರಿಷತ್‌ ಸದಸ್ಯರಾದ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್‌.ವೀರಯ್ಯ, ಪಾಲಿಕೆ ಮಾಜಿ ಸದಸ್ಯ ಎನ್‌.ಆರ್‌. ರಮೇಶ್‌, ಶಾಸಕರಾದ ಎಸ್‌.ರಘು, ಎಸ್‌.ಮುನಿರಾಜು ಮತ್ತಿತರರು ಅಲ್ಲಿಂದ ಎಸಿಬಿ ಕಚೇರಿಗೆ ತೆರಳಿದರು. ದೂರು ನೀಡಿದ ಸಂದರ್ಭದಲ್ಲಿ ಹೆಬ್ಟಾಳ ಶಾಸಕ 
ವೈ.ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next