ಬೆಂಗಳೂರು: ಕೇಂದ್ರ ಸರ್ಕಾರದ “ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆ್ಯಂಡ್ ಡೆವೆಲೆಪ್‌ಮೆಂಟ್ ಆ್ಯಕ್ಟ್-2016′ (ರೇರಾ) ಕಾಯ್ದೆಗೆ ರಾಜ್ಯ ಸರ್ಕಾರ ಸಚಿವ ಸಂಪುಟದ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ದುರ್ಬಲ ನಿಯಮಗಳನ್ನು ರೂಪಿಸಿದ್ದು, ಇದನ್ನು ಪುನರ್‌ಪರಿಶೀಲಿಸುವಂತೆ ರಾಜ್ಯ ಸರ್ಕಾರ
ಕ್ಕೆ ನಿರ್ದೇಶನ ನೀಡುವಂತೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರೇರಾ ಕಾಯ್ದೆಗೆ ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಈಗಾಗಲೇ ಆರಂಭವಾಗಿರುವ ಎಲ್ಲ ರಿಯಲ ಎಸ್ಟೇಟ್ ಯೋಜನೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡಿದೆ.
ಶೇ.60 ರಷ್ಟು ಮಾರಾಟವಾಗಿರುವ ಎಲ್ಲಾ ಪ್ರಸ್ತುತ ಯೋಜನೆಗಳನ್ನು ಹೊರಗಿಡುವ ಮೂಲಕ ಇದು ಈಗಾಗಲೆ ರಾಜ್ಯದಲ್ಲಿ ಕಾಮಗಾರಿ ನಡೆಯುತ್ತಿರುವ ಎಲ್ಲಾ ಯೋಜನೆಗಳ ಗ್ರಾಹಕರಿಗೆ ಕೇಂದ್ರ ಸರ್ಕಾರ ತಂದ ಕಾಯ್ದೆಯ ಲಾಭ ಮತ್ತು ಭದ್ರತೆ ಸಿಗದ ಹಾಗೆ ಮಾಡಿದ್ದಾರೆ. ಇಂತಹ ತೀರ್ಮಾನವನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ತೆಗೆದುಕೊಂಡಿದೆ.
ಅಲ್ಲದೇ ಈ ಸಚಿವ ಸಂಪುಟದಲ್ಲಿಯೇ ಡಿ.ಕೆ.ಶಿವಕುಮಾರ್, ಎಮ.ಆರ್.ಸೀತಾರಾಮ, ಎಂ.ಕೃಷ್ಣಪ್ಪ, ಕೆ.ಜೆ. ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ, ಆರ್.ರೋಷನ್ ಬೇಗ್, ಆರ್.ವಿ,ದೇಶಪಾಂಡೆ, ಎಂ.ಬಿ.ಪಾಟೀಲ, ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಡಾ. ಎಚ್.ಸಿ.ಮಹದೇವಪ್ಪ, ತನ್ವೀರ್ ಸೇರಿದಂತೆ ಅನೇಕರು ನೇರವಾಗಿ ಅಥವಾ ಪರೋಕ್ಷವಾಗಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ದುರ್ಬಲ ನಿಯಮಾವಳಿಗಳನ್ನು ಜಾರಿ ಮಾಡುವ ತೀರ್ಮಾನಗಳನ್ನು ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ಆರೋಪಿಸಿರುವ ರವಿಕೃಷ್ಣಾ ರೆಡ್ಡಿ, ಕೂಡಲೇ ತಾವು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರನ್ನು ಕರೆಸಿಕೊಂಡು ವಿವರಣೆ ಪಡೆಯಬೇಕು. ಜಮತ್ತು ನಿಯಮಗಳನ್ನು ಪುನರ್‌ಪರಿಶೀಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.