ಬೆಂಗಳೂರು: ಸಂಸ್ಥೆಯೊಳಗಿನ ಭ್ರಷ್ಟಾಚಾರ ಪ್ರಕರಣ, ಲೋಕಾಯುಕ್ತರ ನೇಮಕ ವಿಳಂಬ, ಎಸಿಬಿ ರಚನೆಯಿಂದ ಜನಮಾನಸದಿಂದ ದೂರವಾಗುತ್ತಿದ್ದ ಲೋಕಾಯುಕ್ತ ಸಂಸ್ಥೆ ತನ್ನ ರಚನಾತ್ಮಕ ಕಾರ್ಯಗಳಿಂದಾಗಿ ಹಳೆಯ ವರ್ಚಸ್ಸು ಪಡೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಲೋಕಾಯುಕ್ತ ಮೇಲೆ ವಿಶ್ವಾಸವಿಟ್ಟ ಸಾರ್ವಜನಿಕರು ಲಂಚಾವತಾರದ ವಿರುದ್ಧ ಅಧಿಕಾರಶಾಹಿ,ರಾಜಕಾರಣಿಗಳ ಶಾಮೀಲಿನ ಬಗ್ಗೆ ನೂರಾರು ಸಂಖ್ಯೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.
ಕಳೆದ ಜನವರಿಯಲ್ಲಿ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅಧಿಕಾರ ವಹಿಸಿಕೊಂಡ ಬಳಿಕ ಬಾಕಿ ಉಳಿದಿದ್ದ ಹಳೆಯ ಕೇಸುಗಳ ವಿಚಾರಣೆ ಚುರುಕುಗೊಂಡಿರುವುದಲ್ಲದೆ, ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ದೂರುಗಳ ಹೊಳೆಯೇ ಹರಿದು ಬರುತ್ತಿದೆ. ನ್ಯಾಯಸಿಗಬಹುದೆಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವುದು ದೂರುಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ.
ಈಚೆಗೆ 2400 ಹಳೆಯ ದೂರುಗಳ ಕಡತಗಳು ಮರುಜೀವ ಪಡೆದುಕೊಂಡಿದ್ದು ವಿಚಾರಣಾ ಹಂತದಲ್ಲಿವೆ. ಈ ಪೈಕಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ವಿರುದ್ಧವಿದ್ದ 215 ದೂರುಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ವಿಚಾರಣೆಯಲ್ಲಿ ಕೆಲವು ಅಧಿಕಾರಿಗಳ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ವಿರುದ್ಧದ ಆರೋಪಗಳು ಸಾಬೀತಾಗಿರುವುದು ಕಂಡು ಬಂದಿದೆ. ಅಂತಹ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಹಾಗೂ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ” ಉದಯವಾಣಿ’ಗೆ ಖಚಿತಪಡಿಸಿವೆ.
ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧದ ಲಂಚಗುಳಿತನ, ಅಧಿಕಾರ ದುರ್ಬಳಕೆ, ವಿಳಂಬ ಧೋರಣೆ ಕರ್ತವ್ಯ ನಿರ್ವಹಣೆ ಸೇರಿದಂತೆ ಹಲವು ರೀತಿಯ ದೂರುಗಳು ಲೋಕಾಯುಕ್ತ ಸಂಸ್ಥೆಗೆ ದಾಖಲಾಗುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲೋಕಾಯುಕ್ತ ಕಚೇರಿಗೆ ಎಡತಾಕುವ ಸಾರ್ವಜನಿಕರು ಕೇಂದ್ರ ಕಚೇರಿಯಲ್ಲಿಯೇ ದೂರು ನೀಡುತ್ತಿದ್ದಾರೆ. ಈ ಪೈಕಿ ಜನವರಿಯಿಂದ -ಏಪ್ರಿಲ್ ಅಂತ್ಯಕ್ಕೆ ತಿಂಗಳಿಗೆ ನೂರಕ್ಕೂ ಅಧಿಕವೆಂಬಂತೆ ಇದುವರೆಗೂ ಬರೋಬ್ಬರಿ 550 ದೂರುಗಳು ದಾಖಲಾಗಿವೆ.
ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೇ ನಾಲ್ಕು ತಿಂಗಳಲ್ಲಿ ಈ ಪ್ರಮಾಣದ ದೂರುಗಳು ದಾಖಲಾಗಿರಲಿಲ್ಲ. ವರ್ಷಕ್ಕೆ ಕೇವಲ 400 ದೂರುಗಳು ಮಾತ್ರ ದಾಖಲಾಗುತ್ತಿದ್ದವು ಎಂದು ಲೋಕಾಯುಕ್ತ ಉನ್ನತ ಮೂಲಗಳು ತಿಳಿಸಿವೆ. ಕಳೆದ ನಾಲ್ಕು ತಿಂಗಳಿನಲ್ಲಿ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಆರೋಗ್ಯ, ಕಂದಾಯ ಇಲಾಖೆ, ಅಧಿಕಾರಿಗಳ ವಿರುದ್ಧವೇ ಹೆಚ್ಚು ದೂರು ದಾಖಲಾಗಿವೆ. ಲಂಚ ಬೇಡಿಕೆ ಸಂಬಂಧ ಬರುವ ಹಲವು ದೂರುಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ವಿಧಾನಸಭಾ ಸಚಿವಾಲಯದ ಉಸ್ತುವಾರಿ ಜಂಟಿ ಕಾರ್ಯದರ್ಶಿ ಎಸ್. ಮೂರ್ತಿ ವಿರುದ್ಧ ಅಧಿಕಾರ ದುರ್ಬಳಕೆ ಹಾಗೂ 2012ರಲ್ಲಿ ಸೇವೆಗೆ ಪುನರ್‌ನೆàಮಕಗೊಂಡಾಗ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿ ಮಾರ್ಚ್ 9ರಂದು ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಇದಲ್ಲದೆ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಆರೋಪ ಸಂಬಂಧ ಕೆಲವು ಹಿರಿಯ ಐಎಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿರುವ ಅಧಿಕಾರಿಗಳ ವಿರುದ್ಧದ ದೂರುಗಳು ಲೋಕಾಯುಕ್ತದ ಮೆಟ್ಟಿಲೇರಿದ್ದು ಅವರಿಗೆ ತನಿಖೆಯ ಬಿಸಿ ತಟ್ಟುವುದು ನಿಚ್ಚಳವಾಗಿದೆ.
9 ಮಂದಿ ವಿಚಾರಣಾ ಅಧಿಕಾರಿಗಳ ನೇಮಿಸುವಂತೆ ಸರ್ಕಾರಕ್ಕೆ ಪತ್ರ!
ಮತ್ತೂಂದೆಡೆ ಬಾಕಿ ದೂರುಗಳ ವಿಚಾರಣೆಯೂ ವೇಗ ಪಡೆದುಕೊಂಡಿದೆ. ಆದರೆ ಲೋಕಾಯುಕ್ತ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಬಾಕಿಯಿರುವ ಕೇಸುಗಳು 3200ಕ್ಕೂ ಅಧಿಕವಾಗಿದ್ದು, ವಿಚಾರಣಾ ಅಧಿಕಾರಿಗಳ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಶೀಘ್ರವೇ ಜಿಲ್ಲಾ ನ್ಯಾಯಾಧೀಶರ ಹಂತದ 9 ಮಂದಿಯನ್ನು ಲೋಕಾಯುಕ್ತ ವಿಚಾರಣಾ ಅಧಿಕಾರಿಗಳಾಗಿ ಕಳುಹಿಸಿಕೊಡಬೇಕು. ಜೊತೆಗೆ ಕಾನೂನು ಪರಿಣತೆ ಹೊಂದಿರುವ 3 ಮಂದಿ ರೀಸರ್ಚ್ ಅಸಿಸ್ಟೆಂಟ್ ಹುದ್ದೆಗಳನ್ನು ಸೃಷ್ಟಿಸಿ ನೇಮಕಗೊಳಿಸುವಂತೆ ರಾಜ್ಯಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಈಗಾಗಲೇ ಬಾಕಿ ಕೇಸುಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಸಲುವಾಗಿ ಲೋಕಾಯುಕ್ತದ ಇಬ್ಬರು ಡೆಪ್ಯುಟಿ ರಿಜಿಸ್ಟ್ರಾರ್‌ಗಳ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಚಾರಣೆ ನಡೆಸುತ್ತಿವೆ. ಆದರೆ ಸಿಬ್ಬಂದಿ ಕೊರತೆಯಿಂದ ಹಲವು ಕೇಸ್‌ಗಳ ವಿಚಾರಣೆ ತಡವಾಗಲಿದೆ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಆರೋಪಿತ ಸರ್ಕಾರಿ ಅಧಿಕಾರಿಗಳು ಕಾನೂನು ಕ್ರಮದಿಂದ ಪಾರಾಗುವ ಸಾಧ್ಯೆತೆಯಿದೆ. ಹೀಗಾಗಿಯೇ ಹೊಸದಾಗಿ ಜಿಲ್ಲಾನ್ಯಾಯಾಧೀಶರ ಸ್ಥಾನದ 12ಹುದ್ದೆಗಳನ್ನು ಸೃಷ್ಟಿಸಿ ಕಳುಹಿಸಿಕೊಡುವಂತೆ ಕೋರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಪ್ಪಿತಸ್ಥ ಅಧಿಕಾರಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ಪಾರಾಗಬಾರದು. ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಬಾಕಿಯಿರುವ ಹಳೆಯ ದೂರುಗಳನ್ನು ಹಂತ -ಹಂತವಾಗಿ ತ್ವರಿತ ವಿಚಾರಣೆ ನಡೆಸಲಾಗುತ್ತಿದೆ. ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣಾ ಸಿಬ್ಬಂದಿಯ ಅಗತ್ಯವಿದ್ದು, ಹೊಸ ಹುದ್ದೆಗಳನ್ನು ಸೃಷ್ಟಿಸಿ ನೇಮಕಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯಿದೆ.
– ನ್ಯಾ.ಪಿ ವಿಶ್ವನಾಥಶೆಟ್ಟಿ, ಲೋಕಾಯುಕ್ತ
– ಮಂಜುನಾಥ ಲಘುಮೇನಹಳ್ಳಿ