ಬೆಂಗಳೂರು: ದೆಹಲಿಯ ಫ್ಲ್ಯಾಟ್‌ನಲ್ಲಿ ದೊರೆತ ಹಣ ಹಾಗೂ ಇತರ ವಸ್ತುಗಳಿಗೆ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ಆರೋಪಿತರು ಸಮರ್ಪಕ ದಾಖಲೆ ಸಲ್ಲಿಸಿಲ್ಲ. ಹೀಗಾಗಿ, ತೆರಿಗೆ ವಂಚನೆ ಸಂಬಂಧ ದೂರು ದಾಖಲಿಸಿರುವುದು ಸರಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಆದಾಯ ತೆರಿಗೆ ವಂಚನೆ ಆರೋಪ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ನಡೆಸಿತು.
ಆದಾಯ ತೆರಿಗೆ ಇಲಾಖೆ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ಐಟಿ ದಾಳಿ ವೇಳೆ ವಶಪಡಿಸಿಕೊಂಡ ಹಣ ಅಥವಾ ಇನ್ನಿತರ ವಸ್ತುಗಳಿಗೆ ಸಂಬಂಧಿಸಿದಂತೆ ಆರೋಪಿತರು 120 ದಿನಗಳ ಒಳಗೆ ದಾಖಲೆ ಸಲ್ಲಿಸಬೇಕು.
ಆದರೆ, ಡಿ.ಕೆ.ಶಿವಕುಮಾರ್ ಅವರು ಮತ್ತು ಸಹ ಆರೋಪಿಗಳು ದಾಖಲೆ ಸಲ್ಲಿಸಿಲ್ಲ. ಹೀಗಾಗಿ, ದೂರು ದಾಖಲಿಸಿರುವುದು ಕ್ರಮಬದ್ಧವಾಗಿದೆ. ಜತೆಗೆ ಆರ್ಥಿಕ ವರ್ಷ ಪೂರ್ಣಗೊಳ್ಳುವ ಮುನ್ನವೇ ದಾಳಿ ನಡೆಸುವ ಅಧಿಕಾರವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ವಿಚಾರಣೆಗೆ ಸಚಿವ ಡಿ.ಕೆ.ಶಿವಕುಮಾರ್, ಇತರ ಆರೋಪಿಗಳಾದ ರಾಜೇಂದ್ರ , ಆಂಜನೇಯ, ಸುನೀಲ್ ಶರ್ಮಾ ಹಾಜರಿದ್ದರು. ಪ್ರಕರಣದ ವಿಚಾರಣೆಯನ್ನು ಜೂನ್ 7ಕ್ಕೆ ನ್ಯಾಯಾಲಯ ಮುಂದೂಡಿದೆ.