Advertisement

ಜಿಪಂ ಅಧ್ಯಕ್ಷ ಗಾದಿಗೆ ಪೈಪೋಟಿ

12:45 PM May 19, 2020 | mahesh |

ಚಿತ್ರದುರ್ಗ: ಕೋವಿಡ್ ಮಹಾಮಾರಿ ಆತಂಕದ ನಡುವೆಯೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಾದಿಗೆ ತೆರೆಮರೆಯಲ್ಲಿ ಪೈಪೋಟಿ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್‌ ನಾಯಕರು ಒಂದು ಸುತ್ತಿನ ಸಭೆ ನಡೆಸಿದ್ದು, ಬಿಜೆಪಿ ಸದ್ದಿಲ್ಲದೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಕಾಂಗ್ರೆಸ್‌ನ ಜಿ.ಎಂ. ವಿಶಾಲಾಕ್ಷಿ ನಟರಾಜ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಚಿತ್ರದುರ್ಗ ಜಿಪಂಗೆ ಮೇ 22ರಂದು ಚುನಾವಣೆ ನಿಗದಿಯಾಗಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಈಗಾಗಲೇ ಅಭ್ಯರ್ಥಿಯ ತಲಾಶ್‌ ನಡೆಸುತ್ತಿದೆ. ಈ ಸಂಬಂಧ ಇತ್ತೀಚೆಗೆ ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್‌ ಅವರ ತೋಟದಲ್ಲಿ ಕಾಂಗ್ರೆಸ್‌ ಪ್ರಮುಖರ ಸಭೆಯೂ ನಡೆದಿದೆ.

Advertisement

ಮಾಜಿ ಸಚಿವ ಹಾಗೂ ಎಂಎಲ್‌ಸಿ ಎಚ್‌. ಎಂ. ರೇವಣ್ಣ ಕಾಂಗ್ರೆಸ್‌ ಪಕ್ಷದಿಂದ ಜಿಲ್ಲೆಗೆ ಉಸ್ತುವಾರಿಯಾಗಿ ಆಗಮಿಸಿ ಜಿಪಂ ಅಧ್ಯಕ್ಷ ಸ್ಥಾನ ಕೈ ತಪ್ಪಿ ಹೋಗದಂತೆ ಅಗತ್ಯ ಎಚ್ಚರಿಕೆ ವಹಿಸಲು
ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ. 2016ರಲ್ಲಿ ಅಸ್ತಿತ್ವಕ್ಕೆ ಬಂದ ಜಿಪಂ ಅವ ಧಿ 2021ರ ಮೇ 3ಕ್ಕೆ ಕೊನೆಯಾಗಲಿದೆ. 37 ಸದಸ್ಯ ಬಲದ ಚಿತ್ರದುರ್ಗ ಜಿಪಂನಲ್ಲಿ ಕಾಂಗ್ರೆಸ್‌ 22, ಬಿಜೆಪಿ 10, ಜೆಡಿಎಸ್‌ 2 ಹಾಗೂ ಇಬ್ಬರು ಪಕ್ಷೇತರ ಸದಸ್ಯರರಿದ್ದಾರೆ. ಇದರಲ್ಲಿ ಕಾಂಗ್ರೆಸಿನಿಂದ ಆಯ್ಕೆಯಾಗಿದ್ದ ಸದಸ್ಯೆ ಸೌಭಾಗ್ಯ ಬಸವರಾಜನ್‌ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಬಿಜೆಪಿಯ ಕಡೇ ಆಟದ ಆತಂಕ: ಸದ್ಯ ಜಿಪಂಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸರಳ ಬಹುಮತವಿದ್ದರೂ ಬಿಜೆಪಿ ಆಡುವ ಕಡೇ ಗಳಿಗೆಯ ಆಟದ ಆತಂಕ ಇದ್ದೇ ಇದೆ. ಈ ಹಿಂದೆ ಸೌಭಾಗ್ಯ ಬಸವರಾಜನ್‌ ಅವರ ಮೇಲೆ ಅವಿಶ್ವಾಸ ತಂದ ನಂತರ ವಿಶಾಲಾಕ್ಷಿ ನಟರಾಜ್‌ ಅವರ ಆಯ್ಕೆಗೆ ನಡೆದ ಚುನಾವಣೆ ವೇಳೆ ಬಿಜೆಪಿಯ ನಡೆ ಕಾಂಗ್ರೆಸ್ಸಿಗೆ ಇರುಸು ಮುರುಸು ಸೃಷ್ಟಿಸಿತ್ತು. ಖುದ್ದು ಮಾಜಿ ಸಚಿವ ಎಚ್‌. ಆಂಜನೇಯ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಬಿಜೆಪಿ ಸಭೆ ನಡೆಯುತ್ತಿದ್ದ ನವೀನ್‌ ರೀಜೆನ್ಸಿ ಹೋಟೆಲ್‌ ಮುಂದೆ ಬಂದು ನಿಂತು ತಮ್ಮ ಪಕ್ಷದ ಸದಸ್ಯರು ಕೈ ಜಾರದಂತೆ ನೋಡಿಕೊಂಡಿದ್ದರು.

ಈಗ ಜಿಲ್ಲೆಯಲ್ಲಿ ಬಿಜೆಪಿಯ ಐದು ಜನ ಶಾಸಕರಿದ್ದಾರೆ. ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಸಂಸದ ಎ. ನಾರಾಯಣಸ್ವಾಮಿ ಇರುವುದರಿಂದ ಈ ಆತಂಕ ಮತ್ತಷ್ಟು ಹೆಚ್ಚಾಗಿದೆ. ಬಿಜೆಪಿ ಕೂಡಾ ಕಡೇ ಗಳಿಗೆಯ ಆಟಕ್ಕೆ ಮುಂದಾಗಿದ್ದು, ಜಿಪಂಯಲ್ಲಿ ಅಧಿಪತ್ಯ ಸ್ಥಾಪಿಸಲು ಹೊಂಚು ಹಾಕುತ್ತಿದೆ. ಈ ಹಿಂದಿನ ಅವಧಿಯಲ್ಲಿ ಕೂಡಾ ಕಾಂಗ್ರೆಸ್‌ ಸದಸ್ಯರ ಜತೆಗೂಡಿ ಬಿಜೆಪಿ ಅಧಿಕಾರ ಸ್ಥಾಪಿಸಿತ್ತು, ಹೊಳಲ್ಕೆರೆಯ ಶಿವಕುಮಾರ್‌ ಅಧ್ಯಕ್ಷರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈಗ ಮತ್ತಷ್ಟು ಜಾಗ್ರತೆಯಿಂದ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದೆ.

ಲೋಕಸಭೆ ಚುನಾವಣೆ ಹಲ್‌ಚಲ್‌ ಸಮಸ್ಯೆ: ಕಳೆದ ಲೋಕಸಭೆ ಚುನಾವಣೆ ವೇಳೆ ಜಿಪಂ ಸದಸ್ಯರ ನಡುವೆ ನಡೆದ ಹಲ್‌ಚಲ್‌ ಆತಂಕ ಸೃಷ್ಟಿಸಿದೆ. ಬಿಜೆಪಿ ಗೆಲುವಿನ ಅಲೆಯ ಹಿಂದೆ ಹಲವು ಕಾಂಗ್ರೆಸ್‌ ಸದಸ್ಯರೂ ಬಂದಿದ್ದರು. ಕೆಲ ಸದಸ್ಯರು ಬಹಿರಂಗವಾಗಿಯೇ ಬಿಜೆಪಿ ಬೆಂಬಲಿಸಿದ್ದರು. ಈಗಲೂ ಬಿಜೆಪಿ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಲ್‌ಚಲ್‌ನಲ್ಲಿ ಅತ್ತಿತ್ತ ಸರಿದಾಡಿದವರು ಈಗ ಯಾರ ಪರ ನಿಲ್ಲುತ್ತಾರೆ. ವಿಪ್‌ ಜಾರಿಯಾದರೆ ಏನಾಗಲಿದೆ. ನಿಜವಾಗಲೂ ಯಾರು ಯಾವ ಪಕ್ಷದಲ್ಲಿದ್ದಾರೆ ಎನ್ನುವುದು ಮೇ 22 ರಂದು ನಡೆಯುವ ಜಿಪಂ
ಅಧ್ಯಕ್ಷರ ಚುನಾವಣೆಯಲ್ಲಿ ಗೊತ್ತಾಗಲಿದೆ.

ಮುಂದೂಡುವ ಆತಂಕ
ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿ ಮಾಡಿವೆ. ಈಗ ನಾಲ್ಕನೇ ಹಂತದ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದು, ಅದರಲ್ಲಿ ಶಾಲೆಗಳು, ಚಿತ್ರಮಂದಿರ, ಹೋಟೆಲ್‌, ಮಂದಿರಗಳನ್ನು ತೆರೆಯುವುದನ್ನು ನಿರ್ಬಂಧಿಸಿದೆ. ಅದರಂತೆ ಸಭೆ, ಸಮಾರಂಭಗಳಿಗೂ ನಿರ್ಬಂಧ ಇದ್ದು, ಈ ಕಾರಣಕ್ಕೆ ಚುನಾವಣೆ ಮುಂದೂಡುವ
ಸಾಧ್ಯತೆಗಳನ್ನು ಲೆಕ್ಕ ಹಾಕಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next