ಹುಮನಾಬಾದ: ಪಟ್ಟಣದ ಪುರಸಭೆ 27 ವಾರ್ಡ್ ಪೈಕಿ ಈಗಾಗಲೇ 5 ವಾರ್ಡ್‌ಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಇನ್ನುಳಿದ 22 ವಾರ್ಡ್‌ಗಳಲ್ಲಿ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮಧ್ಯ ಪೈಪೋಟಿ ಏರ್ಪಟ್ಟಿದೆ. ಜಾತಿವಾರು ಮತಗಳನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಪಟ್ಟಣದ ಎಲ್ಲರ ಗಮನ ಸೆಳೆದ ವಾರ್ಡ್ 1ರಲ್ಲಿ ಎರಡನೇ ಬಾರಿ ಆಯ್ಕೆ ಬಯಸಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಾರ್ವತಿಬಾಯಿ ಪಿ. ಮಾಳಗೆ, ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್ ಪಕ್ಷದ ರೇಷ್ಮಾರೆಡ್ಡಿ ಮತ್ತು ಬಿಜೆಪಿಯ ಸೀಮಾ ಕಟ್ಟಿಮನಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ವಾರ್ಡ್ 2ರಿಂದ ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕಾಂಗ್ರೆಸ್ ಅಭ್ಯರ್ಥಿ ಓಂಪ್ರಕಾಶ ಅಗಡಿ, ಜೆಡಿಎಸ್‌ನ ವೀರೇಶ ಸೀಗಿ, ಎರಡು ಬಾರಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಸಂಜಯ್ ದಂತಕಾಳೆ ಮರಳಿ ಯತ್ನಿಸುತ್ತಿದ್ದಾರೆ. ಇನ್ನು ಪಕ್ಷಚೇತರರಾಗಿ ಎಂ.ಡಿ.ದಸ್ತಗೀರ್, ಮಗ್ದುಮ್ ಸ್ಪರ್ಸಿದರೂ ನೇರ ತ್ರಿಕೋನ ಸ್ಪರ್ಧೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಇದೆ.
ವಾರ್ಡ್ 4ರಲ್ಲಿ ಜೆಡಿಎಸ್ ಅಬ್ದುಲ್ ರೆಹೆಮಾನ್ ಗೋರೆಮಿಯ್ಯ, ಕಾಂಗ್ರೆಸ್ ಪಕ್ಷದ ರಾಘವೇಂದ್ರ, ಪಕ್ಷೇತರ ಅಭ್ಯರ್ಥಿ ಸೈಯದ್ ಯಾಸೀನಲಿ ಸ್ಪರ್ಧಿಸಿದರೂ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ಇದೆ. ವಾರ್ಡ್ 10ರಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಕೃಷ್ಣ ವಿಜಯರಾವ್ ಮುಳೆ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯ ಎಸ್.ಎ.ಬಾಸೀತ್ ಕಣದಲ್ಲಿದ್ದು, ಇಬ್ಬರ ಮಧ್ಯ ತೀವ್ರ ಪೈಪೋಟಿ ಇದೆ.
ವಾರ್ಡ್ 14ರಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಪಾಷಾಬೀ ಮತ್ತು ಜೆಡಿಎಸ್ ಪಕ್ಷದ ಹಜರತಬೀ ಮಧ್ಯ ಭಾರೀ ಪೈಪೋಟಿ ಇದೆ. ಪುರಸಭೆಗೆ 5ಬಾರಿ ಆಯ್ಕೆಯಾಗಿ 6ನೇ ಅವಧಿಗಾಗಿ ವಾರ್ಡ್ 16ರಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅಹ್ಮದ್ ಮೈನೋದ್ದಿನ್(ಅಪ್ಸರಮಿಯ್ಯ) ಮತ್ತು ದ್ವಿತೀಯ ಬಾರಿ ಅಖಾಡಕ್ಕೆ ಇಳಿದಿರುವ ಜೆಡಿಎಸ್ ಪಕ್ಷದ ಆಜಮ್ ಮತೀನ್ ಮಧ್ಯ ತೀವ್ರ ಪೈಪೋಟಿ ಇದೆ.
ವಾರ್ಡ್ 22ರಿಂದ ಸ್ಪರ್ಧಿಸಿರುವ ಸತ್ಯವತಿ ಎಸ್.ಮಠಪತಿ, ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಉಷಾದೇವಿ ಎಸ್.ರೆಡ್ಡಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ವಾರ್ಡ್ 23ರಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಮುಕರಂ ಪಟೇಲ, ಪಕ್ಷೇತರ ಅಭ್ಯರ್ಥಿ ಅಮಾನಖಾನ್ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಮೊದಲು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಒಂದೊಮ್ಮೆ ಅಧ್ಯಕ್ಷೆಯಾಗಿ, ಮತ್ತೂಮ್ಮೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಗುಜ್ಜಮ್ಮ ನಾಗರೆಡ್ಡಿ ಕನಕಟಕರ್ ಅವರು ಈ ಬಾರಿ 27ನೇ ವಾರ್ಡ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಸಾಧನೆಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಲ್ಲಕ್ಕೂ ಮೇ 29ಕ್ಕೆ ನಡೆಯುವ ಮತದಾನ ನಂತರ ಪ್ರಕಟವಾಗುವ ಫಲಿತಾಂಶಕ್ಕಾಗಿ ಕಾಯಬೇಕು.
•ಶಶಿಕಾಂತ ಕೆ.ಭಗೋಜಿ