Advertisement

ಅವಕಾಶ ಗಿಟಿಸಿಕೊಳ್ಳಲು ಪೈಪೋಟಿ

03:38 PM Dec 13, 2018 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸಮ್ಮಿಶ್ರ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿರುವ ಬೆನ್ನಲೇ ನಿಗಮ, ಮಂಡಳಿಗಳಲ್ಲಿ ಅವಕಾಶ ಗಿಟ್ಟಿಸಿ ಕೊಳ್ಳಲು ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಮುಖಂಡರ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

ಬೆಳಗಾವಿ ಅಧಿವೇಶನದ ಕೊನೆ ದಿನ ಸಚಿವ ಸಂಪುಟ ವಿಸ್ತರಣೆ ಕುರಿತು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಪಕ್ಷಗಳ ಉಭಯ ನಾಯಕರು ನಿರ್ಧರಿಸಿದ್ದು, ಈ ವೇಳೆ ನಿಗಮ ಮಂಡಳಿಗಳಿಗೂ ನೇಮಕ ಮಾಡುವ ತಿರ್ಮಾನ ಕೈಗೊಂಡಿರುವುದರಿಂದ ಕಾಂಗ್ರೆಸ್‌, ಜೆಡಿಎಸ್‌ ಪಾಳೆಯಲ್ಲಿ ಬಿರುಸಿನ ರಾಜಕೀಯ ಚಟವಟಿಕೆಗಳು ಗರಿಗೆದುರಿದೆ. 

ಶಾಸಕರ ನಡುವೆ ಪೈಪೋಟಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿರುವ ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ನಿಗಮ, ಮಂಡಳಿಗಳಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ತಮ್ಮದೇ ಆದ ತಂತ್ರಗಾರಿಕೆ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದ ಹಿರಿಯ ನಾಯಕರ ಮೇಲೆ ಪ್ರಭಾವ ಬೀರುವ ಕೆಲಸದಲ್ಲಿ ತೊಡಗಿದ್ದಾರೆಂದು ತಿಳಿದು ಬಂದಿದೆ.

ಅದರಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರ ಮಧ್ಯೆಯೇ ತಮ್ಮ ಬೆಂಬಲಿಗರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲು ಪೈಪೋಟಿ ನಡೆಯುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ. ಇದರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಎಂ.ವೀರಪ್ಪ ಮೊಯ್ಲಿ ಸಹ ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸಿ ಕೊಡಲು ಕರಸತ್ತು ನಡೆಸುತ್ತಿದ್ದು, ಜಿಲ್ಲೆಯಲ್ಲಿ ನಿಗಮ ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಜೆಡಿಎಸ್‌ ಮುಖಂಡರ ಮೌನ: ಇನ್ನೂ ರಾಜ್ಯ ಸಮ್ಮಿಶ್ರ ಸರ್ಕಾರದ ನಿಗಮ, ಮಂಡಳಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದಲ್ಲಿ ಕಂಡು ಬರುತ್ತಿರುವ ಚಟುವಟಿಕೆಗಳು ರಾಜಕೀಯವಾಗಿ ಜೆಡಿಎಸ್‌ನಲ್ಲಿ ಕಾಣದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹಿಂದೆಯೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಾವಾಗಿ ನಾವು ನಿಗಮ, ಮಂಡಳಿಗಳಿಗೆ ನೇಮಕ ಮಾಡುವಂತೆ ಅರ್ಜಿ ಹಾಕುವುದಿಲ್ಲ. ಮುಖ್ಯಮಂತ್ರಿಗಳು ನಮ್ಮ ಪಕ್ಷದವರು ಆಗಿರುವುದರಿಂದ ಅವರು ಅವಕಾಶ ಕಲ್ಪಿಸಿದರೆ ನಾವು ಸೇವೆ ಮಾಡಲು ಸಿದ್ದರಿದ್ದೇವೆಂದಿದ್ದರು. ಹೀಗಾಗಿ ಜೆಡಿಎಸ್‌ ಪಕ್ಷದಲ್ಲಿ ನಿಗಮ, ಮಂಡಳಿಗಳಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಅಷ್ಟಾಗಿ ಆಸಕ್ತಿ ತೋರದಿರುವುದು ಜಿಲ್ಲೆಯ ಜೆಡಿಎಸ್‌ ವಲಯದಲ್ಲಿ ಎದ್ದು ಕಾಣುತ್ತಿದೆ. ಆದರೆ ಕೊನೆ ಗಳಿಗೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನು ಜೆಡಿಎಸ್‌ ವಿಚಾರದಲ್ಲಿ ಕಾದು ನೋಡಬೇಕಿದೆ. 

Advertisement

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನಿಗಮ, ಮಂಡಳಿಗಳಲ್ಲಿ ತಮ್ಮ ಬೆಂಬಲಿಗರಿಗೆ, ಅಪ್ತರಿಗೆ ಅವಕಾಶ ಕಲ್ಪಿಸಲು ಜಿಲ್ಲೆಯ ಕಾಂಗ್ರೆಸ್‌ ನಾಯಕರ ಮಧ್ಯೆಯೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಈಗಾಗಲೇ ಗುಂಪುಗಾರಿಕೆ, ವೈಮನಸ್ಸಿನಿಂದ ಒಡೆದ ಮನೆಯಾಗಿರುವ ಜಿಲ್ಲಾ ಕಾಂಗ್ರೆಸ್‌ ಪಕ್ಷದಲ್ಲಿ ಅದರಲ್ಲೂ ಜಿಲ್ಲೆಯ ಹಾಲಿ, ಮಾಜಿ ಶಾಸಕರಲ್ಲಿ ನಿಗಮ, ಮಂಡಳಿ ನೇಮಕ ವಿಚಾರ ಇನ್ನಷ್ಟು ಅಸಮಾದಾನ ಹಾಗೂ ಗುಂಪುಗಾರಿಕೆಗೆ ಕಾರಣವಾಗಲಿ¨

ರೇಸ್‌ನಲ್ಲಿ ಯಾರ್ಯಾರು?
ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನಿಗಮ ಮಂಡಳಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಜೆಡಿಎಸ್‌ ಪಕ್ಷಕ್ಕಿಂತ ಜಿಲ್ಲೆಯ ಕಾಂಗ್ರೆಸ್‌ ಪಕ್ಷದೊಳಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ರಾಗಿದ್ದ ಯಲುವಹಳ್ಳಿ ರಮೇಶ್‌, ಹಾಲಿ ಕೋಚಿಮುಲ್‌ ನಿರ್ದೇಶಕ ರಾಗಿರುವ ಕೆ.ವಿ.ನಾಗರಾಜ್‌, ಜಿಪಂ ಸದಸ್ಯರಾಗಿರುವ ಬಾಗೇಪಲ್ಲಿ ತಾಲೂಕಿನ ಚಿಕ್ಕನರಸಿಂಹಯ್ಯ (ಚಿನ್ನಿ), ರಾಜ್ಯ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿಯಾಗಿರುವ ಚಿಕ್ಕಬಳ್ಳಾಪುರದ ಅಡ್ಡಗಲ್‌ ಶ್ರೀಧರ್‌ ಹೆಸರುಗಳು ಪ್ರಮುಖವಾಗಿ ನಿಗಮ, ಮಂಡಳಿಗಳ ನೇಮಕ ವಿಚಾರದಲ್ಲಿ ಕೇಳಿ ಬರುತ್ತಿವೆ. 

ಯಲುವಹಳ್ಳಿ ರಮೇಶ್‌ ಪರ ಸಂಸದ ಎಂ.ವೀರಪ್ಪ ಮೊಯ್ಲಿ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌ ಪರ ಶಾಸಕ ಡಾ.ಕೆ. ಸುಧಾಕರ್‌ ಹಾಗೂ ಅಡ್ಡಗಲ್‌ ಶ್ರೀಧರ್‌ ಪರ ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್‌ ಬೀಸುತ್ತಿದ್ದಾರೆಂದು ತಿಳಿದು ಬಂದಿದ್ದು, ನೇಮಕಾತಿ ವಿಚಾರದಲ್ಲಿ ಯಾರ ಕೈ ಮೇಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಯ ಕೈ ಶಾಸಕರಿಗೆ ಸಿಗುತ್ತಾ ಮಂತ್ರಿಗಿರಿ?
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿಗೆ ಬಾಕಿ ಇರುವ ಆರು ಸಚಿವ ಸ್ಥಾನಗಳಿಗೆ ಜಿಲ್ಲೆಯ ಹಿರಿಯ ಶಾಸಕರಾಗಿರುವ ಶಿಡ್ಲಘಟ್ಟದ ಕ್ಷೇತ್ರದ ವಿ.ಮುನಿಯಪ್ಪ ಹಾಗೂ ಯುವಕರ ಕೋಟಾದಡಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಪ್ರಬಲ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‌ಗೆ ಇರುವ ಆರು ಸಚಿವ ಸ್ಥಾನಗಳಿಗೆ ಡಜನ್‌ಗಟ್ಟಲೇ ಘಟಾನುಘಟಿ ನಾಯಕರು ಆಕಾಂಕ್ಷಿಗಳಾಗಿದ್ದಾರೆ. ಇತಂಹ ವೇಳೆ ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ವಿ.ಮುನಿಯಪ್ಪ, ಡಾ.ಕೆ.ಸುಧಾಕರ್‌ಗೆ ಸಚಿವ ಸ್ಥಾನ ದೊರೆಯುತ್ತಾ ಅಥವಾ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡಿ ತೃಪ್ತಿಪಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆಯೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ತನಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದಿದ್ದರು. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕಾತಿ ರಾಜಕೀಯವಾಗಿ ಜಿಲ್ಲೆಯಲ್ಲಿ ಸಾಕಷ್ಟು ಗಮನ ಸೆಳೆದಿದೆ.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next