ವಸಾಯಿ: ಕಳೆದ ಎರಡು ವರ್ಷ ಗಳಿಂದ ಕೋವಿಡ್ ಬಿಕ್ಕಟ್ಟಿನಿಂದ ತುಳು, ಕನ್ನಡಿಗ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ನಿಂತ ನೀರಿನಂತಾಗಿದೆ. ಅದರಲ್ಲಿಯೂ ಶೈಕ್ಷಣಿಕ ವ್ಯವಸ್ಥೆಯಂತೂ ಆನ್‌ಲೈನ್ ಮೂಲಕ ನಡೆಸುವ ಸ್ಥಿತಿಗೆ ತಲುಪಿದೆ. ಆನ್‌ಲೈನ್ ಶಿಕ್ಷಣದ ವ್ಯವಸ್ಥೆಯಿಂದಾಗಿ ಮಕ್ಕಳ ದೈಹಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು ನಿಂತಿದ್ದು, ಮುಂಬಯಿ ತುಳು ಕನ್ನಡಿಗ ಮಕ್ಕಳ ಮನೋಸ್ಥೈರ್ಯವನ್ನು ಬಲಪಡಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಸಾಯಿ ಕರ್ನಾಟಕ ಸಂಘದ ವತಿಯಿಂದ ದೇಶದ ಸ್ವಾತಂತ್ರ್ಯಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಮಕ್ಕಳ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ಭಾಗವಹಿಸಿದ ಮಕ್ಕಳ ಉತ್ಸಾಹ, ಭಾಷಾ ಪ್ರಯೋಗ ಹಾಗೂ ಭಾಷಣದ ಪ್ರಸ್ತುತಿ ಕಂಡು ಸಂತಸವಾಯಿತು. ಎಲ್ಲ ಮಕ್ಕಳು ಆಯಾಯ ಪ್ರಾಯಕ್ಕನುಗುಣವಾಗಿ ತಮ್ಮ ಭಾಷಣವನ್ನು ಪ್ರಸ್ತುತಿಪಡಿದ್ದಾರೆ. ಭಾಗವಹಿಸಿದ ಎಲ್ಲ ಪುಟಾಣಿ ಸ್ಪರ್ಧಿಗಳಿಗೆ, ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ ಪಾಲಕರಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳು. ಸ್ಪರ್ಧೆಯು ಕೋವಿಡ್ ಕಾಲದಲ್ಲಿ ಮಕ್ಕಳ ಮನೋಸ್ಥೈರ್ಯವನ್ನು ವೃದ್ಧಿಸಿದೆ ಎಂದು ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ತಿಳಿಸಿದರು.
ವಸಾಯಿ ಪೂರ್ವದ ಹೊಟೇಲ್ ರುದ್ರ ಶೆಲ್ಟರ್ ಇಂಟರ್‌ನ್ಯಾಶನಲ್ ಸಭಾಗೃಹದಲ್ಲಿ ವಸಾಯಿ ಕರ್ನಾಟಕ ಸಂಘದ ವತಿಯಿಂದ ಸಂಘದ ಫೇಸ್‌ಬುಕ್ ನೇರಪ್ರಸಾರ ಕಾರ್ಯಕ್ರಮದ ಮೂಲಕ ಆಯೋಜಿಸಿದ ಮಕ್ಕಳ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ಲಸಿಕೆಯ 2 ಡೋಸ್ ಪಡೆದವರಿಗೆ ಗೋವಾ ಪ್ರವೇಶಕ್ಕೆ ಅನುಮತಿ : ಗೋವಾ ನ್ಯಾಯಪೀಠ
ಮಕ್ಕಳ ಭಾಷಣ ಸ್ಪರ್ಧೆಯ ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಸಂಘದ ಗೌರವ ಅಧ್ಯಕ್ಷ, ವಿನೀತ್ ಕೆಮಿಕಲ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ವಿಶ್ವನಾಥ ಪಿ. ಶೆಟ್ಟಿಯವರನ್ನು ವಿಶೇಷವಾಗಿ ಸಂಘದ ಪರವಾಗಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳ ಭಾಷಾ ಪ್ರೌಢಿಮೆಗೆ ಪೂರಕವೆನ್ನುವಂತಹ ಕಾರ್ಯಕ್ರಮವನ್ನು ವಸಾಯಿ ಕರ್ನಾಟಕ ಸಂಘದ ಪರವಾಗಿ ಆಯೋಜಿಸಿರುವುದು ಅಭಿನಂದನೀಯ. ಕನ್ನಡ ಭಾಷೆಯ ಕಂಪು ಲೋಕಾದ್ಯಂತ ಪಸರಿಸಲಿ, ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭವಾಗಲಿ ಎಂದರು.
ಮಕ್ಕಳ ಭಾಷಣ ಸ್ಪರ್ಧೆಯ ಫಲಿತಾಂಶವನ್ನು ಸಂಘದ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ, ಗೌರವ ಅಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ, ಗೌರವ ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಒ. ಪಿ. ಪೂಜಾರಿ, ಜತೆ ಕಾರ್ಯದರ್ಶಿ ರವೀಂದ್ರ ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಹರಿಪ್ರಸಾದ್ ಎಸ್. ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಪ್ರಮೀಳಾ ಎನ್. ಅಮೀನ್, ಯುವ ವಿಭಾಗ ಕಾರ್ಯಾಧ್ಯಕ್ಷ ಪೃಥ್ವಿರಾಜ್ ಎಸ್. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ ಎನ್. ಶೆಟ್ಟಿ ಕೊಡ್ಲಾಡಿ ಅವರು ಘೋಷಿಸಿದರು.
ಮುಂಬಯಿಯ ಹೆಸರಾಂತ ಉದ ಯೋನ್ಮುಖ ಗಾಯಕ ವಿಜಯ್ ಶೆಟ್ಟಿ ಮೂಡುಬೆಳ್ಳೆಯವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ಮಕ್ಕಳ ಭಾಷಣ ಸ್ಪರ್ಧೆ ಯಶಸ್ವಿಯಾಗಿ ನೆರವೇರಿಸುವಲ್ಲಿ ಸಹಕರಿಸಿದ ರಾಮಚಂದ್ರ ಡಿ. ಹೆಗ್ಡೆ, ನವೀನ್ ಎಂ. ಶೆಟ್ಟಿ, ಪ್ರಮೀಳಾ ಎನ್. ಅಮೀನ್, ಪೃಥ್ವಿರಾಜ್ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ದೇವೇಂದ್ರ ಬಿ. ಬುನ್ನನ್ ವಂದಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಿಜಯ್ ಪಿ. ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಭಾಷಣ ಸ್ಪರ್ಧೆಗೆ ತೀರ್ಪುಗಾರರಾಗಿ ಗೋವಿಂದದಾಸ ಕಾಲೇಜು ಸುರತ್ಕಲ್ ಇದರ ಉಪನ್ಯಾಸಕ ರಾಕೇಶ್ ಹೊಸಬೆಟ್ಟು, ಪ್ರಾಧ್ಯಾಪಕಿ ಮತ್ತು ಸಾಹಿತಿ ವಿಜಯಾ ಶೆಟ್ಟಿ ಸಾಲೆತ್ತೂರು ಹಾಗೂ ಕೆನರಾ ಕಾಲೇಜು ಮಂಗಳೂರಿನ ಉಪನ್ಯಾಸಕ, ಖ್ಯಾತ ಟಿವಿ ನಿರೂಪಕ ಡಾ| ಅರುಣ್ ಉಳ್ಳಾಲ್ ಸಹಕರಿಸಿದರು.