ಬಳ್ಳಾರಿ: ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್-ಬಿಜೆಪಿ ಟಿಕೆಟ್‌ಗಾಗಿ ಎಲ್ಲ ವಾರ್ಡ್‌ಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ತಲೆನೋವಾಗಿ ಪರಿಗಣಿಸಿದ್ದು ಯಾರಿಗೆ ಟಿಕೆಟ್ ನೀಡಿದರೆ ಯಾರು ಬಂಡಾಯ ಏಳುತ್ತಾರೋ ಎಂಬ ಆತಂಕವೂ ಸಮಿತಿಯನ್ನು ಕಾಡುತ್ತಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಏ. 27ರಂದು ಚುನಾವಣೆ ನಡೆಯಲಿದೆ. ಇದೇ ಏಪ್ರಿಲ್ 8ರಂದು ಅಧಿ ಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚಾಲನೆ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಚುರುಕು ಪಡೆದುಕೊಂಡಿವೆ.
ಬಿಜೆಪಿ ಪಕ್ಷದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ. ಶಾಂತಾ ಸೇರಿ ಹಲವರು ಎಲ್ಲ ವಾರ್ಡ್‌ಗಳಿಗೆ ತಾವೇ ಖುದ್ದಾಗಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ. ಈ ವೇಳೆ ಪ್ರತಿ ವಾರ್ಡ್‌ಗಳಿಂದ ಕನಿಷ್ಠ 5ರಿಂದ 10 ಆಕಾಂಕ್ಷಿಗಳು ಸ್ಪ ರ್ಧಿಸಲು ಟಿಕೆಟ್ ಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.
ಅದೇ ರೀತಿ ಕಾಂಗ್ರೆಸ್‌ನವರು ಆಕಾಂಕ್ಷಿಗಳಿಂದ ಆಯಾ ವಾಡ್ ìವಾರು ಮೀಸಲಾತಿ ಅನುಗುಣವಾಗಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಇಲ್ಲೂ ಪ್ರತಿಯೊಂದು ವಾರ್ಡ್‌ಗಳಿಂದ 5ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಾರ್ಡ್‌ವಾರು ಸಲ್ಲಿಕೆಯಾಗಿರುವ ಆಕಾಂಕ್ಷಿಗಳ ಅರ್ಜಿಗಳ ಪೈಕಿ ಸಾಮಾನ್ಯ, ಹಿಂದುಳಿದ ವರ್ಗಗಳ ಮೀಸಲು ವಾರ್ಡ್‌ಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕೆಲವೊಂದು ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆ ಆಕಾಂಕ್ಷಿಗಳಿಂದ ಅರ್ಜಿಗಳು ಸಲ್ಲಿಕೆಯಾಗಿವೆ.
ವಾರ್ಡ್‍ಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಎಷ್ಟೇ ಇದ್ದರೂ ಪಕ್ಷದಿಂದ ಒಬ್ಬರಿಗೆ ಮಾತ್ರ ಬಿ ಫಾರ್ಮ್ ನೀಡಿ ಕಣಕ್ಕಿಳಿಸಲು ಸಾಧ್ಯ. ಹೀಗಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಗೆ ತಲೆನೋವಾಗಿರುವುದು ಒಂದು ಕಡೆಯಾದರೆ, ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದ ಬಳಿಕ ಯಾರ್ಯಾರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಪಕ್ಷದ ಅಭ್ಯರ್ಥಿಗೆ ಕಂಠಕ ತರಲಿದ್ದಾರೆ ಎಂಬ ಆತಂಕವೂ ಸಮಿತಿಯನ್ನು ಕಾಡುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವೆಂಕೋಬಿ ಸಂಗನಕಲ್ಲು