Advertisement

ಹಣ್ಣು ಹಂಪಲು ಬೀಜ ಬಿತ್ತಿ; ಪ್ರಶಸ್ತಿ ಗೆಲ್ಲಿ!

02:07 AM Jun 05, 2022 | Team Udayavani |

ಮಂಗಳೂರು: ಕಾಡಿನಂಚಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲೆಗಳ ವಿದ್ಯಾರ್ಥಿಗಳು ಹಣ್ಣು ಹಂಪಲುಗಳ ಬೀಜ ತಂದು ಶಾಲೆಯ ಪಕ್ಕದ ಕಾಡಿನಲ್ಲಿ ಬಿತ್ತಬೇಕು; ಅತೀ ಹೆಚ್ಚು ಬೀಜ ತಂದ ಮಕ್ಕಳಿಗೆ ಅರಣ್ಯ ಇಲಾಖೆ ಇನಾಮು ನೀಡಲಿದೆ!

Advertisement

ರಾಜ್ಯದಲ್ಲಿಯೇ ಪ್ರಥಮ ಬಾರಿ ವಿದ್ಯಾರ್ಥಿಗಳಿಂದ ಬೀಜ ಬಿತ್ತನೆ ಅಭಿಯಾನವನ್ನು ಜಿಲ್ಲೆಯ ಅರಣ್ಯ ಇಲಾಖೆ ಸಂಯೋಜಿಸಿದೆ. ಸಸ್ಯ ಬೆಳೆಸುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು ಮತ್ತು ಪರಿಸರ ಜಾಗೃತಿ ಇದರ ಉದ್ದೇಶ. ಮುಂದೆ ಎಲ್ಲ ಶಾಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ.

ಏನಿದು ಪರಿಕಲ್ಪನೆ?
ಅರಣ್ಯ ಇಲಾಖೆಯ ಮಂಗಳೂರು ವಿಭಾಗಕ್ಕೆ ಸೇರಿರುವ ದ.ಕ. ಜಿಲ್ಲೆಯಲ್ಲಿ ವಿವಿಧ ವಿಭಾಗಗಳಿವೆ. ಒಂದೊಂದು ಸೆಕ್ಷನ್‌ (ಶಾಖೆ)ನಲ್ಲಿ ಕಾಡಂಚಿನ ತಲಾ 2 ಶಾಲೆಗಳನ್ನು ಅರಣ್ಯ ಇಲಾಖೆಯೇ ಆಯ್ಕೆ ಮಾಡಲಿದೆ. ನಿಗದಿತ ದಿನ ವಿದ್ಯಾರ್ಥಿಗಳು ಬೀಜಗಳನ್ನು ತರಬೇಕು. ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಹೆಚ್ಚು ಹಣ್ಣಿನ ಬೀಜ ತಂದವರನ್ನು ಆಯ್ಕೆ ಮಾಡುತ್ತಾರೆ. ಬಳಿಕ ಆಯಾ ವಿದ್ಯಾರ್ಥಿಗಳೇ ಬಿತ್ತನೆ ಮಾಡಲಿದ್ದಾರೆ.

ತಾಲೂಕು ಮಟ್ಟದಲ್ಲಿ ಪ್ರಶಸ್ತಿ
ಶಾಲೆಯ ಕಾರ್ಯಕ್ರಮ ಆದ ಬಳಿಕ ತಾಲೂಕು ಮಟ್ಟದಲ್ಲಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತೀ ಹೆಚ್ಚು ಹಣ್ಣಿನ ಬೀಜ ತಂದಿದ್ದ ವಿದ್ಯಾರ್ಥಿಗಳ ಪೈಕಿ ಆಯ್ದವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

128 ಶಾಲೆಗಳಿಗೆ ಸ್ಪರ್ಧೆಯ ಅವಕಾಶ
ಮಂಗಳೂರು ವಿಭಾಗದಲ್ಲಿ 8 ರೇಂಜ್‌ಗಳು; ಒಂದು ರೇಂಜ್‌ನಲ್ಲಿ 8 ಸೆಕ್ಷನ್‌ಗಳಿವೆ. ಒಂದೊಂದು ಸೆಕ್ಷನ್‌ನಲ್ಲಿ 2 ಶಾಲೆಗಳಂತೆ 16 ಶಾಲೆಗಳನ್ನು ಒಂದು ರೇಂಜ್‌ನಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ 8 ರೇಂಜ್‌ಗಳಲ್ಲಿ 128 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

Advertisement

ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವ ನೆಲೆಯಲ್ಲಿ ಬೀಜ ಬಿತ್ತನೆ ಕಾರ್ಯಕ್ರಮವನ್ನು ಮಂಗಳೂರು ವಲಯದಲ್ಲಿ ವಿಭಿನ್ನವಾಗಿ ಆಯೋಜಿಸಲಾಗುತ್ತಿದೆ. ಕಾಡಂಚಿನ ಶಾಲೆಗಳ ವಿದ್ಯಾರ್ಥಿಗಳು ಜೂ. 5ರಿಂದ 15 ದಿನಗಳ ವರೆಗೆ ಹಣ್ಣುಹಂಪಲು ಬೀಜ ತಂದು ಬಿತ್ತಲಿದ್ದಾರೆ. ಹೆಚ್ಚು ಬೀಜ ತಂದವರಿಗೆ ಪ್ರಶಸ್ತಿ ಇರಲಿದೆ.
ಡಾ| ದಿನೇಶ್‌ ಕುಮಾರ್‌ ವೈ.ಕೆ.,
ಮಂಗಳೂರು ಅರಣ್ಯ ಉಪ ಸಂರಕ್ಷಣಾಧಿಕಾರಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next