Advertisement

ಡಿಜಿ ಹುದ್ದೆಗೆ ಮೂವರ ನಡುವೆ ತೀವ್ರ ಪೈಪೋಟಿ

07:40 AM Oct 31, 2017 | Team Udayavani |

ಬೆಂಗಳೂರು: ಕರ್ನಾಟಕ ಪೊಲೀಸ್‌ ಮುಖ್ಯಸ್ಥ ಹುದ್ದೆಯಾದ ಪೊಲೀಸ್‌ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರು ಯಾರು ಎಂಬ ಕುತೂಹಲ ಮೂಡಿದೆ. ಅ.31ರಂದು ಹಾಲಿ ಡಿಜಿ ಆರ್‌.ಕೆ.ದತ್ತಾ ನಿವೃತ್ತಿಯಾಗಲಿದ್ದು, ಮುಂದಿನ ಡಿಜಿ ಸ್ಥಾನಕ್ಕೆ ಹಿರಿಯ ಮಹಿಳಾ ಐಪಿಎಸ್‌ ಅಧಿಕಾರಿ ಸೇರಿದಂತೆ ಮೂವರು ಭಾರಿ ಪೈಪೋಟಿಯಲ್ಲಿದ್ದಾರೆ. ಸಿಎಂ
ಸಿದ್ದರಾಮಯ್ಯ ಮಂಗಳವಾರ ಅಧಿಕೃತವಾಗಿ ಘೋಷಿಸಲಿದ್ದಾರೆ.

Advertisement

ಆರ್‌.ಕೆ. ದತ್ತಾ ಬಳಿಕ ಸೇವಾ ಹಿರಿತನದಲ್ಲಿ ಅಗ್ನಿಶಾಮಕ ದಳದ ಮುಖ್ಯಸ್ಥೆ ನೀಲಮಣಿ ಎನ್‌. ರಾಜು, ಬಳಿಕ ಸಿಐಡಿ ಡಿಜಿ ಕಿಶೋರ್‌ ಚಂದ್ರ ಅನಂತರ ಎಸಿಬಿ ಮುಖ್ಯಸ್ಥ ಎಂ.ಎನ್‌.ರೆಡ್ಡಿ ಸಾಲಿನಲ್ಲಿದ್ದಾರೆ. ಈ ಮೂವರ ಪೈಕಿ ನೀಲಮಣಿ
ರಾಜು ಮತ್ತು ಎಂ.ಎನ್‌.ರೆಡ್ಡಿ ಅವರ ಸೇವಾವಧಿ 3 ವರ್ಷ ಇದ್ದು, ಕಿಶೋರ್‌ ಚಂದ್ರಗೆ ಒಂದೂವರೆ ವರ್ಷ ಸೇವಾವಧಿ ಬಾಕಿ ಇದೆ. ಈ ಹಿಂದಿನ ಡಿಜಿ ಓಂಪ್ರಕಾಶ್‌ ರಾವ್‌ ನಿವೃತ್ತಿ ಸಂದರ್ಭದಲ್ಲಿಯೂ ಈ ಮೂವರ ಹೆಸರು ಕೇಳಿ ಬಂದಿತ್ತು.

ನೀಲಮಣಿರಾಜು: 1983ರ ಬ್ಯಾಚ್‌ನ ಅಧಿಕಾರಿ ನೀಲಮಣಿರಾಜು ಉತ್ತರ ಪ್ರದೇಶದವರು. ಕಳೆದ ವರ್ಷವಷ್ಟೇ ರಾಜ್ಯ ಸೇವೆಗೆ ಹಿಂದಿರುಗಿದ್ದಾರೆ. ಆಡಳಿತ ಮತ್ತು ಸುಧಾರಣೆ ಇಲಾಖೆಯಲ್ಲಿದ್ದ ನೀಲಮಣಿರಾಜು ಅವರ ಸೇವಾ ದಾಖಲೆಗಳು
ನಾಪತ್ತೆಯಾಗಿತ್ತು. ಜತೆಗೆ ಕೇಂದ್ರ ಸೇವೆಯಿಂದ ಮರಳಿದ ಹಿರಿಯ ಐಪಿಎಸ್‌ ಅಧಿಕಾರಿ ಆರ್‌.ಕೆ.ದತ್ತಾ ಅವರಿಗೆ ಹುದ್ದೆ ನೀಡಲು ನೀಲಮಣಿ ರಾಜು ಅವರನ್ನು ಇಲಾಖೆಯ ಮುಖ್ಯಸ್ಥರ ಹುದ್ದೆಯಿಂದ ಕೈಬಿಡಲಾಯಿತು. ನೀಲಮಣಿ ರಾಜು ಅವರಿಗೆ ಪೊಲೀಸ್‌ ಮುಖ್ಯಸ್ಥ ಸ್ಥಾನ ನೀಡುವ ಮೂಲಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಉನ್ನತ ಸ್ಥಾನ
ನೀಡಿದ ಹೆಗ್ಗಳಿಕೆ ಪಡೆಯಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಅಲ್ಲದೆ, ಇವರು ಕಾನೂನು ಚೌಕಟ್ಟು ಮೀರದೆ ಆಡಳಿತ ನಡೆಸುವ ಖಡಕ್‌ ಅಧಿಕಾರಿ. ಜತೆಗೆ ಇವರಿಗೆ ಡಿಜಿ ಹುದ್ದೆ ನೀಡಿದರೆ ಇನ್ನು 3 ವರ್ಷ ಬದಲಾವಣೆ ಮಾಡುವಂತಿಲ್ಲ. ಹೀಗಾಗಿ ನೀಲಮಣಿರಾಜು ಬದಲಿಗೆ ಇನ್ನು ಒಂದೂವರೆ ವರ್ಷ ಸೇವಾವಧಿ ಬಾಕಿ ಇರುವ ಕಿಶೋರ್‌ ಚಂದ್ರ ಅವರಿಗೆ ನೀಡಿ, 2019ರ ಮೇ ನಲ್ಲಿ ನಿವೃತ್ತಿ ಹೊಂದಿದ ಬಳಿಕ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಕಿಶೋರ್‌ ಚಂದ್ರ: 1984ರ ಸಾಲಿನ ಹಿರಿಯ ಅಧಿಕಾರಿಯಾಗಿರುವ ಸಿಐಡಿ ಡಿಜಿ ಕಿಶೋರ್‌ ಚಂದ್ರ ಮೈಸೂರು ಮೂಲದವರು. ಜತೆಗೆ ರಾಜ್ಯದ ಪ್ರಭಾವಿ ಒಕ್ಕಲಿಗ ಸಮುದಾಯದವರು. ಮೂಲಗಳ ಪ್ರಕಾರ ಈಗಾಗಲೇ ಒಕ್ಕಲಿಗ ಸಮುದಾಯದ ಸ್ವಾಮೀಜಿ ಗಳು ಹಾಗೂ ಕೆಲ ರಾಜಕೀಯ ಮುಖಂಡರು ಕಿಶೋರ್‌ ಚಂದ್ರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಮತ್ತೂಂದೆಡೆ ಕನ್ನಡ ಪ್ರೇಮ ಹೊಂದಿ ರುವ ಸಿದ್ದರಾಮಯ್ಯ ಅವರು ಕನ್ನಡಿಗರೊಬ್ಬರನ್ನು ಇಲಾಖೆ ಮುಖ್ಯಸ್ಥರನ್ನಾಗಿ ಮಾಡಿ ಕನ್ನಡ ಪ್ರೇಮ ಪ್ರದರ್ಶಿಸಲು ತೀರ್ಮಾನಿಸಿದರೆ ಶಂಕರ್‌ ಬಿದರಿ ನಂತರ ಮತ್ತೂಬ್ಬ ಕನ್ನಡಿಗರಿಗೆ ಪೊಲೀಸ್‌ ಇಲಾಖೆಯ ಸರ್ವೋಚ್ಚ ಪದವಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಎಂ.ಎನ್‌.ರೆಡ್ಡಿ: ಇನ್ನು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಂ.ಎನ್‌.ರೆಡ್ಡಿ 1984ರ ಬ್ಯಾಚ್‌ನ ಅಧಿಕಾರಿಯಾಗಿದ್ದು, ಮೂಲತಃ ಆಂಧ್ರಪ್ರದೇಶ ದವರು. ರಾಜಕೀಯವಾಗಿ ಪ್ರಭಾವಿಯಾಗಿರುವ ರೆಡ್ಡಿ, ಯಾವುದೇ ಸರ್ಕಾರ ಬಂದರೂ
ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವುದು ಇವರ ಸ್ವಭಾವ. ಅಲ್ಲದೇ ಇವರಿಗೆ ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಬೆಂಬಲ ಕೂಡ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next