Advertisement

ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸುಮಲತಾ ಅಂಬರೀಶ್‌

12:30 AM Mar 19, 2019 | Team Udayavani |

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಸುಮಲತಾ ಅಂಬರೀಶ್‌, ಮಾರ್ಚ್‌ 20 ರಂದು ಮಂಡ್ಯದಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ಚುನಾವಣೆ ಯಾರ ವಿರುದ್ಧವೂ ಅಲ್ಲ. ಮಂಡ್ಯ ಜನತೆಗಾಗಿ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ ಸುಮಲತಾ ಅವರಿಗೆ ಅಂಬರೀಶ್‌ ಅವರ ಅತ್ಯಂತ ಆತ್ಮೀಯರಾಗಿದ್ದ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬೆಂಬಲವೂ ಇತ್ತು.

Advertisement

ಸೋಮವಾರ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳಾದ ದರ್ಶನ್‌ ಹಾಗೂ ಯಶ್‌ರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುಮಲತಾ ಮಾತನಾಡಿದರು. ಆರಂಭದಿಂದಲೇ ಭಾವುಕರಾಗಿಯೇ ಮಾತು ಆರಂಭಿಸಿದ ಅವರು, ಎಲ್ಲಿಯೂ ಸಂಯಮ ಕಳೆದುಕೊಳ್ಳದೆ ತಮ್ಮ ಸ್ಪರ್ಧೆಯ ಉದ್ದೇಶವನ್ನು ಸ್ಪಷ್ಟಪಡಿಸಿದರು. ಅಲ್ಲದೇ, ತಮಗಾಗಿರುವ ನೋವನ್ನು ವಿವರವಾಗಿ ಹೇಳದೇ ಹೋದರೂ, ತಮ್ಮ ವಿರುದ್ಧ ವೈಯಕ್ತಿಕವಾಗಿ ನಡೆಯುತ್ತಿರುವ ವಾಗ್ಧಾಳಿ ಬಗ್ಗೆ ಅವರಲ್ಲಿರುವ ಬೇಸರ ಅವರ ಧ್ವನಿಯಲ್ಲೇ ಎದ್ದು ಕಾಣುತ್ತಿತ್ತು.

“ಜೀವನದಲ್ಲಿ ಕೆಲವು ಕ್ಷಣಗಳನ್ನು ನಾವು ಹುಡುಕಿಕೊಂಡು ಹೋಗಿ ಅವುಗಳನ್ನು ನಮ್ಮದನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಕೆಲವು ಕ್ಷಣಗಳು ನಮ್ಮನ್ನು ಹುಡುಕಿಕೊಂಡು ಬಂದು ಅವೇ ನಿರ್ಧಾರ ಮಾಡಿ ಬಿಡುತ್ತವೆ. ನನ್ನ ಜೀವನದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಾನು ಯಾವ ಕ್ಷಣವನ್ನು ನೋಡಬಾರದು ಎಂದು ಕೊಂಡಿದ್ದೇನೊ ಅದು ನನ್ನನ್ನು ಹುಡುಕಿಕೊಂಡು ಬಂದಿತ್ತು. ಆ ಸಂದರ್ಭದಲ್ಲಿ ನನ್ನ ಆಪ್ತರು, ಸ್ನೇಹಿತರು ನನಗೆ ಧೈರ್ಯ ತುಂಬಿದರು. ಆ ಬಗ್ಗೆ ಈಗ ಹೇಳಿದರೆ, ಅದು ಬೇರೆ ಅರ್ಥ ಪಡೆದುಕೊಳ್ಳುವ ಸಾಧ್ಯತೆ ಇದೆ,’ ಎಂದು ಅಂಬರೀಶ್‌ ಸಾವಿನ ಸಂದರ್ಭದಲ್ಲಿ ತಮಗಾದ ನೋವಿನ ಬಗ್ಗೆ ಸ್ಮರಿಸಿಕೊಂಡರು.

“ಆ ಸಂದರ್ಭದಲ್ಲಿ ನನ್ನ ಜೀವನಕ್ಕೆ ಇನ್ನೇನು ಅರ್ಥ ಇದೆ ಎಂದುಕೊಂಡು ಕತ್ತಲೆಯಲ್ಲಿ ಕುಳಿತಿದ್ದೆ. ಅಂಬರೀಶ್‌ ಅವರು ಇದ್ದಾಗ ನಮ್ಮ ಮನೆ ಯಾವಾಗಲೂ ತುಂಬಿಕೊಂಡಿರುತ್ತಿತ್ತು. ಅವರು ಹೋದ ಮೇಲೆ ಒಂದಷ್ಟು ಜನರು ಕಾಣಲಿಲ್ಲ. ಆ ಕ್ಷಣದಲ್ಲಿ  ಮಂಡ್ಯದ ಜನರು ಬಂದು ಧೈರ್ಯ ಕಳೆದುಕೊಳ್ಳಬೇಡಿ, ಅಣ್ಣ ಇಲ್ಲ ಎಂದು ಹೇಳಬೇಡಿ, ನೀವು ಏಕಾಂಗಿ ಎಂದುಕೊಳ್ಳಬೇಡಿ, ನಿಮ್ಮ ಕಣ್ಣೀರು ನೋಡುವುದಕ್ಕೆ ನಮಗೆ ಇಷ್ಟ ಇಲ್ಲ ಎಂದು ಹೇಳಿದರು. ಅಂಬರೀಶ್‌ ಹೋದಮೇಲೂ ಇಷ್ಟೊಂದು ಪ್ರೀತಿ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ..,’ ಎಂದರು.

ಅಂಬರೀಶ್‌ ಅವರನ್ನು ಚಿತ್ರರಂಗದಲ್ಲಿ 40 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ. ರಾಜಕೀಯದಲ್ಲಿ 25 ವರ್ಷದಿಂದ ನೋಡುತ್ತ ಬಂದಿದ್ದೇವೆ. ಅವರ ಸ್ಥಾನವನ್ನು ನೀವೇ ತುಂಬಬೇಕು. ಈ ಪ್ರೀತಿ ವಿಶ್ವಾಸ ಮುಂದುವರೆಯಬೇಕು. ನಿಮ್ಮ ಸೇವೆ ನಮಗೆ ಬೇಕಿದೆ. ಅಂಬರೀಶ್‌ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಕನಸು ನನಸು ಮಾಡಲು ನೀವೇ ಮುಂದೆ ಬರಬೇಕು ಎಂದು ಅಭಿಮಾನಿಗಳು ತಮ್ಮ ಮನೆಗೆ  ಬಂದು ಹೇಳುತ್ತಿದ್ದರು ಎಂದು ಸುಮಲತಾ ಸ್ಮರಿಸಿದರು.

Advertisement

“ಅಭಿಮಾನಿಗಳ ಮಾತು ಕೇಳಿದಾಗ ನಾನು ಕಷ್ಟವಾದರೂ, ಅವರ ಮಾತಿಗೆ ಬೆಲೆ ಕೊಡದಿದ್ದರೆ, ಅಂಬರೀಶ್‌  ಪತ್ನಿಯಾಗಿರುವುದಕ್ಕೆ ಅರ್ಥವೇ ಇರುವುದಿಲ್ಲ ಎಂದುಕೊಂಡು ಪಕ್ಷೇತರಳಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನನ್ನ ಈ ನಿರ್ಧಾರ ಕೆಲವರಿಗೆ ಇಷ್ಟ ಆಗದೇ ಇರಬಹುದು. ಮಂಡ್ಯದ ಜನರು ಅಂಬರೀಶ್‌ ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ಉಳಿಸಿಕೊಳ್ಳಬೇಕೆನ್ನುವುದಷ್ಟೇ ನನ್ನ ಬಯಕೆ. ಅಂಬರೀಶ್‌ ಅವರನ್ನು ನಂಬಿದ ಜನರ ಕನಸು ನನಸು ಮಾಡಲು ಮಂಡ್ಯದ ಜನರ ಮನಸ್ಸು ನೋಯಿಸಬಾರದು ಎನ್ನುವ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು  ತೀರ್ಮಾನಿಸಿದ್ದೇನೆ,’ ಎಂದು ಹೇಳಿದರು.

“ಈ ಸಂದರ್ಭದಲ್ಲಿ ನನಗೆ ಧೈರ್ಯ ನೀಡಿದ ನನ್ನ ಸಹೋದರ ರಾಕ್‌ಲೈನ್‌ ವೆಂಕಟೇಶ್‌, ನನ್ನ ದೊಡ್ಡ ಮಗನಂತೆ ನಿಂತ ದರ್ಶನ್‌, ಯಶ್‌  ಹಾಗೂ ಇಂತಹ ಕುಟುಂಬಗಳು, ಇಂತಹ ಮಕ್ಕಳು ನನ್ನೊಂದಿಗೆ ಇದ್ದಾರೆ ಎಂದು ಹೇಳಲು ಪುಣ್ಯ ಮಾಡಿದ್ದೇನೆ,’ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಯಾರೂ ವೈಯಕ್ತಿಕ ಹೇಳಿಕೆ ನೀಡಿ ಮನಸ್ಸು ನೋಯಿಸುವುದು ಬೇಡ. ನಾವು ಯುವ  ಪೀಳಿಗೆಗೆ ಮಾರ್ಗದರ್ಶಕರಾಗಿರಬೇಕು ಎಂದು ಸಲಹೆ ನೀಡಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅಂಬರೀಶ್‌ ಅವರು ಕಾಂಗ್ರೆಸ್‌ನಲ್ಲಿದ್ದ ಕಾರಣ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದೆ. ಕಾಂಗ್ರೆಸ್‌ ಮುಖಂಡರು ಸಮ್ಮಿಶ್ರ ವ್ಯವಸ್ಥೆಯಲ್ಲಿರುವುದರಿಂದ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ತಮಗೆ ಬೆಂಗಳೂರು ದಕ್ಷಿಣ, ಉತ್ತರ ಕ್ಷೇತ್ರ, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಮಂಡ್ಯದ ಜನರ ಪ್ರೀತಿ ಕಳೆದುಕೊಳ್ಳಲು ತಮಗೆ  ಇಷ್ಟವಿಲ್ಲ. ಇದು ಕಷ್ಟದ ಹಾದಿಯಾದರೂ, ಸರಿಯಾದ ಹಾದಿ ಎಂದುಕೊಂಡಿರುವುದಾಗಿ ವಿವರಿಸಿದರು ಸುಮಲತಾ.

ಮೈತ್ರಿ ಮಾಡಿಕೊಂಡಿರುವುದು ಮಂಡ್ಯ ಕಾಂಗ್ರೆಸ್‌ ಕಾರ್ಯಕರ್ತರ ಅತೃಪ್ತಿಗೆ ಕಾರಣವಾಗಿದೆ. ಅವರು ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅಂಬರೀಶ್‌ ಇದ್ದಾಗ ಕಾವೇರಿ ನೀರಿನ ಸಮಸ್ಯೆ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅಂತಹ ತೀರ್ಮಾನ ಈಗಿನ ಯಾವುದಾದರೂ ರಾಜಕಾರಣಿ ತೆಗೆದುಕೊಂಡಿದ್ದರೆ ತೋರಿಸಿ! ನಾವು ರೈತರ ಪರವಾಗಿ ಇಲ್ಲ ಎಂದು ಹೇಳುತ್ತಿರುವುದು ಸುಳ್ಳು ಎಂದು ಹೇಳಿದರು.

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಾಕಷ್ಟು ಒತ್ತಡ ಬಂದಿದೆ. ಆದರೂ, ಮಂಡ್ಯದ ಜನರ ಪ್ರೀತಿ  ತಮಗೆ ಶಕ್ತಿ ತುಂಬಿದೆ. ಚುನಾವಣೆ ನಂತರ ಯಾವ ಪಕ್ಷ ಸೇರಬೇಕು ಎನ್ನುವುದನ್ನು ಮಂಡ್ಯದ ಜನತೆಯ ಅಭಿಪ್ರಾಯ ಕೇಳಿ ನಿರ್ಧರಿಸುತ್ತೇನೆ. ಬೆಂಬಲ ನೀಡುವಂತೆ ಬಿಜೆಪಿಯ ನಾಯಕರನ್ನು ಕೇಳಿಲ್ಲ. ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ತಮಗೆ ಬೆಂಬಲ ಸೂಚಿಸಲು ಮುಂದೆ ಬಂದಿದ್ದಾರೆ. ರಜನಿಕಾಂತ್‌ ಹಾಗೂ ಚಿರಂಜಿವಿ ಅವರು ಪ್ರಚಾರಕ್ಕೆ ಬರದಿದ್ದರೂ, ಅವರ ಬೆಂಬಲ ಇರುತ್ತದೆ ಎಂದು ಹೇಳಿದರು.

ಅಮ್ಮನ ಪರ ಫ‌ುಲ್‌ ಟೈಮ್‌ ವರ್ಕ್‌ ಮಾಡ್ತೇವೆ: ದರ್ಶನ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದರ್ಶನ್‌, ಮಂಡ್ಯದಲ್ಲಿ ಅಂಬರೀಶ್‌ ಅವರು ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ಯಾವುದೇ ಸಿಂಪಥಿ ಇಟ್ಟುಕೊಂಡು ಹೋಗುವುದಿಲ್ಲ. ನಾನು ಅಪ್ಪಾಜಿಗಾಗಿ ನಾಲ್ಕು ಚುನಾವಣೆ ಮಾಡಿದ್ದೇನೆ. ಅವರು ಹೇಳಿದ ಬೇರೆ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡಿದ್ದೇನೆ ಎಂದರು. 

ಮಂಡ್ಯದಲ್ಲಿ ನಿಖೀಲ್‌ ಪರ ಪ್ರಚಾರ ಮಾಡಲು ಹೋಗುವುದನ್ನು ತಳ್ಳಿ ಹಾಕಿದ ಅವರು, ಒಂದೇ ಕ್ಷೇತ್ರದಲ್ಲಿ ಇಬ್ಬರ ಪರವಾಗಿ ಪ್ರಚಾರ ಮಾಡಲು ಆಗುವುದಿಲ್ಲ. ಪ್ರಜ್ವಲ್‌ ಕೂಡ ನನಗೆ ಒಳ್ಳೆಯ ಸ್ನೇಹಿತ, ಅವನು ಪ್ರಚಾರಕ್ಕೆ ಆಹ್ವಾನ ನೀಡಿದರೆ,ಅವನ ಪರ ಪ್ರಚಾರ ಮಾಡುತ್ತೇನೆ ಎಂದರು. ಈ ಚುನಾವಣೆಯಲ್ಲಿ ನನ್ನ ಜೊತೆಗೆ ಯಶ್‌ ಇದ್ದಾರೆ, ನಾವಿಬ್ಬರೂ ಜೋಡಿ ಎತ್ತುಗಳಾಗಿ ಗಾಡಿ ಎಳೆಯುತ್ತೇವೆ ಎಂದರು. ಸುದೀಪ್‌ರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನನಗೆ ಗೊತ್ತಿಲ್ಲ. ಸುದೀಪ್‌ ಅವರನ್ನೇ ಕೇಳಬೇಕು ಎಂದರು.

ಕಲಾವಿದನಾಗಲ್ಲ, ಮನೆ ಮಕ್ಕಳಾಗಿ ಬೆಂಬಲಕ್ಕೆ ನಿಂತಿದ್ದೇವೆ: ಯಶ್‌ “ಸುಮಲತಾ ಅಂಬರೀಶ್‌ ಅವರಿಗೆ ಬೆಂಬಲಿಸಲು ಕಲಾವಿದರಾಗಿ ಬಂದಿಲ್ಲ. ಅವರ ಮನೆಯ ಮಕ್ಕಳಾಗಿ ಬೆಂಬಲಕ್ಕೆ ನಿಂತಿದ್ದೇವೆ’ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ಹೇಳಿದ್ದಾರೆ. “ಅಂಬರೀಶ್‌ ಅವರು, ನನ್ನನ್ನು ಮನೆ ಮಗ ಎಂದು ಬೆಳೆಸಿದ್ದಾರೆ. ಅದು ನನ್ನ ಪುಣ್ಯ. ಈಗ ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರ ಜೊತೆಗೆ ಇರಬೇಕಾಗಿರುವುದು ಎಲ್ಲರ ಕರ್ತವ್ಯ’ ಎಂದರು. 

ಅಂಬರೀಶ್‌ ಅವರು ನಮಗೆಲ್ಲ ಅಷ್ಟೊಂದು ಸಹಾಯ ಮಾಡಿದ್ದಾರೆ. ಅವರು ಈಗ ನಮ್ಮೊಂದಿಗಿಲ್ಲ ಎಂಬ ಬೇಸರ ಇದೆ. ಆದರೂ, ನಾವು ಸುಮಲತಾ ಅವರೊಂದಿಗೆ ಇದ್ದೇವೆ. ಅಂಬರೀಶ್‌ ಏನು ಎಂದು ಮಂಡ್ಯದ ಜನರಿಗೆ ಗೊತ್ತಿದೆ.ಮಂಡ್ಯ ಎಂದರೆ ಅಂಬರೀಶ್‌ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸುಮಲತಾ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದರು. ಸುಮಲತಾ ಅವರಿಗೆ ಲೋಕಸಭೆ ಪ್ರವೇಶಿಸುವ ಎಲ್ಲ ಅರ್ಹತೆ ಇದೆ. ತಮಗೆ ಗೊತ್ತಿಲ್ಲದಿರುವುದನ್ನು ಕೇಳಿ ತಿಳಿದುಕೊಳ್ಳುವ ತಾಳ್ಮೆ ಅವರಿಗಿದೆ. ಮಂಡ್ಯ ಜನರು ಅವರನ್ನು ಕೈ ಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ನಾವು ಅವರ ಮಕ್ಕಳಾಗಿ ತಾಯಿಯ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ಘೋಷಣೆ ಕೂಗಿದ ಅಭಿಮಾನಿಗಳು: ಪತ್ರಿಕಾಗೋಷ್ಠಿ ಸಭಾಂಗಣದಲ್ಲಿ ಮಂಡ್ಯದಿಂದ ಆಗಮಿಸಿದ್ದ ಸುಮಲತಾ ಅಂಬರೀಶ್‌ ಅವರ ಅಭಿಮಾನಿಗಳು ತುಂಬಿಕೊಂಡಿದ್ದರು. ಸುಮಲತಾ ಸುದೀರ್ಘ‌ ಮಾತನಾಡಿ, ತಾವು ಮಂಡ್ಯದ ಜನರಿಗಾಗಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ತಕ್ಷಣ ಅಭಿಮಾನಿಗಳು ಜೋರಾಗಿ ಕರತಾಡನ ಮಾಡಿದರು. ಅಲ್ಲದೇ “ಮಂಡ್ಯದ ಮದರ್‌ ಸುಮಲತಾಗೆ ಜೈ’ ಎಂದು ಘೋಷಣೆ ಕೂಗಿದರು

Advertisement

Udayavani is now on Telegram. Click here to join our channel and stay updated with the latest news.

Next