Advertisement

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ

10:43 AM Dec 29, 2019 | Team Udayavani |

ಹುಬ್ಬಳ್ಳಿ: ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಸರಕಾರಿ ಶಾಲೆಯ ಶಿಕ್ಷಕರು ಮಕ್ಕಳನ್ನು ಅಣಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು. ಹಳೇಹುಬ್ಬಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ 120ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇಂದು ಖಾಸಗಿ ಶಾಲೆಗಳ ಸ್ಪರ್ಧೆಗಳ ಮುಂದೆ ಸರಕಾರಿ ಶಾಲೆಗಳು ಹಿನ್ನಡೆ ಅನುಭವಿಸುತ್ತಿವೆ. ಇಂತಹ ಸಮಯದಲ್ಲೂ ಸರಕಾರಿ ಶಾಲೆ ಯಾವುದಕ್ಕೂ ಕಡಿಮೆಇಲ್ಲ ಎನ್ನುವಂತೆ ನಡೆಯುತ್ತಿದ್ದು, ಸರಕಾರಿ ನಂ.1 ಶಾಲೆ ಸದಾ ನಂ.1 ಶಾಲೆಯಾಗಿಯೇ ಹೊರಹೊಮ್ಮಬೇಕು. ಸದ್ಗುರು ಗುರುನಾಥಾರೂಢರು ಅಧ್ಯಯನ ಮಾಡಿರುವ ಶಾಲೆ ಎನ್ನುವ ಹೆಮ್ಮೆ ಎಲ್ಲರಿಗೂ ಇದ್ದು, ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರು. ಉತ್ತರ ಕರ್ನಾಟಕ ಎಂದರೆ ಕೀಳುಭಾವನೆ ಇದ್ದು, ಇದರಿಂದಲೇ ಈ ಭಾಗದಲ್ಲಿ ಸರಕಾರಿ ಶಾಲೆಗಳಿಗೆ ಕೊರತೆ ಇದೆ. ಅದೇ ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಸರಕಾರಿ ಶಾಲೆಗಳಿರುವುದನ್ನು ನಾವು ನೋಡಿದ್ದೆವೆ. ಈ ಭಾಗದ ಮಠಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಎಲ್ಲರಿಗೂ ಶಿಕ್ಷಣ ಸಿಗುವಂತಾಗಲಿ ಎಂದು ಮುಂದೆ ಬಂದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಹೇಳಿದರು.

ಖಾಸಗಿ ಟಿವಿ ವಾಹಿನಿ ಕಾರ್ಯವೊಂದರಲ್ಲಿ ಸ್ಪರ್ಧಿಸಿದ್ದ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರುಬಿನಾ ನದಾಫ್‌ ಹಾಡು ಹಾಡಿದಳು. ನಂತರ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹಲವರನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಜ್ಞಾನ ಪ್ರಯೋಗಾಲಯ, ಸಿಸಿ ಕ್ಯಾಮರಾ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ಶಾಲೆ ನಡೆದು ಬಂದ ದಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಮುಖೋಪಾಧ್ಯಾಯ ಎಚ್‌.ಎಂ. ಕುಂದರಗಿ ಪ್ರಾಸ್ತಾವಿಕ ಮಾತನಾಡಿದರು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ತಾಪಂ ಅಧ್ಯಕ್ಷೆ ಚನ್ನಮ್ಮ ಗೋರ್ಲ, ಬಸಪ್ಪ ಬೀರಣ್ಣವರ, ಡಾ| ಪಾಂಡುರಂಗ ಪಾಟೀಲ, ರಾಧಾಬಾಯಿ ಸಫಾರೆ, ಪ್ರೇಮನಾಥ ಚಿಕ್ಕತುಂಬಳ, ರವಿ ಬಂಕಾಪುರ, ಬಿಇಒ ಶ್ರೀಶೈಲ ಕರಿಕಟ್ಟಿ, ತೋಟಪ್ಪ ನಿಡಗುಂದಿ, ಎಲ್‌.ಬಿ.ಚುಳಕಿ, ಇನ್ಸ್‌ಪೆಕ್ಟರ್‌ ಮಾರುತಿ ಗುಳ್ಳಾರಿ, ನಾರಾಯಣ ಪಾಂಡುರಂಗಿ, ಎ.ಎ. ಮಿರ್ಜಿ, ಎಂ.ಎಸ್‌. ಶಿವಳ್ಳಿಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next