ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ಪುನಾರಚನೆ, ಖಾತೆಗಳ ಹಂಚಿಕೆ ನಂತರ ಇದೀಗ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸುವುದು ತಲೆಬಿಸಿಯಾಗಿದೆ. ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ನೀಡುವ ಸರ್ಕಸ್‌ನಲ್ಲಿಯೂ ಕಾಂಗ್ರೆಸ್‌ನ ಕೆಲವು ಹಿರಿಯ ಸಚಿವರು ಮತ್ತಷ್ಟು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಪ್ರಮುಖವಾಗಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಬೆಂಗಳೂರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಹೊಸ ಸಚಿವರಿಗೆ ಉಸ್ತುವಾರಿ ಅವಕಾಶ ಕಲ್ಪಿಸಲು ಒಂದು ಜಿಲ್ಲೆ ಬಿಟ್ಟುಕೊಡಬೇಕಾಗುತ್ತದೆ. ತುಮಕೂರು ಜಿಲ್ಲೆಯಿಂದ ಸಚಿವರಾಗಿರುವ ಸಣ್ಣ ಕೈಗಾರಿಕೆ ಸಚಿವ ಗುಬ್ಬಿ ಶ್ರೀನಿವಾಸ್ ಹಾಗೂ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಉಸ್ತುವಾರಿ ವಹಿಸಲಾಗಿದೆ. ಆದರೂ, ಹೊಸ ಸಚಿವರಿಗೆ ಅವಕಾಶ ಕಲ್ಪಿಸಲು ಪರಮೇಶ್ವರ್ ಒಂದು ಜಿಲ್ಲೆ ಬಿಟ್ಟುಕೊಡಬೇಕಾಗಬಹುದು.
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ರಾಮನಗರದ ಜೊತೆಗೆ ಹೆಚ್ಚುವರಿಯಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದು, ಈಗ ಬಳ್ಳಾರಿಯಿಂದ ಇಬ್ಬರು ಸಚಿವರಾಗಿ ನೇಮಕಗೊಂಡಿರುವುದರಿಂದ ಡಿ.ಕೆ. ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಬಳ್ಳಾರಿ ಉಸ್ತುವಾರಿಯಾಗಿ ಇ.ತುಕಾರಾಂ ಮತ್ತು ಪಿ.ಟಿ.ಪರಮೇಶ್ವರ್ ನಾಯ್ಕ ನಡುವೆ ಪೈಪೋಟಿ ನಡೆದಿದೆ. ಪಿ.ಟಿ. ಪರಮೇಶ್ವರ್ ನಾಯ್ಕ ಎರಡನೇ ಬಾರಿ ಸಚಿವರಾಗಿರುವುದರಿಂದ ಅವರು ಬಳ್ಳಾರಿ ಉಸ್ತುವಾರಿಗೆ ಪಟ್ಟು ಹಿಡಿಯಬಹದು. ಆದರೆ, ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅಸಮಾಧಾನಗೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು, ತಡವಾಗಿ ಸಂಪುಟ ಸೇರಿ ಮಹತ್ವದ ಗೃಹ ಖಾತೆ ಪಡೆದುಕೊಂಡಿರುವ ಎಂ.ಬಿ.ಪಾಟೀಲ್ ವಿಜಯಪುರ ಜಿಲ್ಲಾ ಉಸ್ತುವಾರಿ ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಆದರೆ, ವಿಜಯಪುರ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಜೆಡಿಎಸ್‌ನ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ವಹಿಸಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಬದಲಾವಣೆಯೂ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆ ಇದೆ.
ಇನ್ನೊಬ್ಬ ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಕೂಡ ಉತ್ತರ ಕನ್ನಡದ ಜೊತೆಗೆ ಹೆಚ್ಚುವರಿಯಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗ ಧಾರವಾಡ ಜಿಲ್ಲೆಯವರಾದ ಸಿ.ಎಸ್. ಶಿವಳ್ಳಿ ಸಚಿವರಾಗಿ ನೇಮಕಗೊಂಡಿರುವುದರಿಂದ ದೇಶಪಾಂಡೆಯವರು ಅನಿವಾರ್ಯವಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಕಳೆದುಕೊಳ್ಳಬೇಕಾಗುತ್ತದೆ.
ಕೃಷ್ಣ ಬೈರೇಗೌಡ ಕೋಲಾರದ ಜೊತೆಗೆ ಹೆಚ್ಚುವರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಬಿಟ್ಟುಕೊಡಬೇಕಾಗುತ್ತದೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೂ ಉಸ್ತುವಾರಿ ಕೈ ತಪ್ಪುವ ಸಾಧ್ಯತೆ ಇದ್ದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಅವರು ಬಾಗಲಕೋಟೆ ಉಸ್ತುವಾರಿ ತಮಗೇ ನೀಡಬೇಕೆಂದು ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆಗ, ಶಿವಾನಂದ ಪಾಟೀಲರಿಗೆ ಕೊಪ್ಪಳ ಅಥವಾ ಗದಗ ಜಿಲ್ಲೆಯ ಜವಾಬ್ದಾರಿ ವಹಿಸಿ ಸಮಾಧಾನ ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿಯವರಿಂದ ಖಾಲಿಯಾಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಸತೀಶ್ ಜಾರಕಿಹೊಳಿ ವಹಿಸಿಕೊಳ್ಳಲಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿಗೆ ವಾಪಸ್ ಆದ ನಂತರ ಉಸ್ತುವಾರಿ ಹಂಚಿಕೆ ನಡೆಯಲಿದೆ.
– ಶಂಕರ ಪಾಗೋಜಿ