ಹುಬ್ಬಳ್ಳಿ: ಮುಂಗಾರು ಪೂರ್ವ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ನೂರಾರು ಮನೆಗಳು ನೆಲಕಚ್ಚಿ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದ್ದು, ಸರಕಾರ ಮಾತ್ರ ಬಿಡಿಗಾಸಿನ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇನ್ನೂ ಹಲವರಿಗೆ ಬಿಡಿಗಾಸು ಕೂಡ ತಲುಪಿಲ್ಲ. ಬರುವ ಪರಿಹಾರದಿಂದ ಬಿದ್ದ ಮನೆ ಜಾಗದಲ್ಲಿ ಒಂದು ಸಣ್ಣ ಸೂರು ಕಟ್ಟಿಕೊಳ್ಳಬೇಕು ಎಂದುಕೊಂಡವರಿಗೆ ಬರಸಿಡಿಲು ಬಡಿದಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಪ್ರವೇಶಕ್ಕಿಂತ ಮೊದಲೇ ಭಾರೀ ಮಳೆಯಾಗಿದ್ದು, ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ. ಬದುಕಿಗೆ ಆಶ್ರಯವಾಗಿದ್ದ ಸೂರು ಧರೆಗುರುಳಿದ್ದು, ದಿನದ ಕೂಲಿಯಲ್ಲಿ ಗಂಜಿ, ಅನ್ನ ತಿಂದು ನೆಮ್ಮದಿಯಿಂದ ಬದುಕುತ್ತಿದ್ದ ಕೆಲ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಬಿದ್ದಿರುವ ಮನೆಗೆ ಸರಕಾರ ಒಂದಿಷ್ಟು ಪರಿಹಾರ ನೀಡಿದರೆ ನಾಲ್ಕು ಗೋಡೆ ಎಬ್ಬಿಸಿ ಮೇಲೆ ತಗಡಿನ ಶೀಟಾದರೂ ಹಾಕಿದರಾಯ್ತು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸರಕಾರ ದೊಡ್ಡ ಶಾಕ್ ನೀಡಿದೆ. ಬಿದ್ದಿರುವ ಮನೆಗಳಿಗೆ ಗರಿಷ್ಠ ಐದು ಸಾವಿರ ರೂ. ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದೀಗ ನೀಡುತ್ತಿರುವ ಪರಿಹಾರ ಬಿದ್ದಿರುವ ಮನೆಯ ಕಲ್ಲುಗಳನ್ನು ಹೊರ ಹಾಕುವ ಕೂಲಿಗೆ ಸಾಲಲ್ಲ ಎನ್ನುವ ಆಕ್ರೋಶ ಜನರಲ್ಲಿ ಮೂಡಿದೆ.
ಜಿಲ್ಲೆಯಲ್ಲಿ ಅಪಾರ ಹಾನಿ: ಮುಂಗಾರು ಪೂರ್ವ ಮಳೆಯಿಂದಾಗಿ ಜಿಲ್ಲೆಯಲ್ಲಿ ನೂರಾರು ಮನೆಗಳು ಬಿದ್ದ ವರದಿಯಾಗಿತ್ತು. ಓರ್ವ ವ್ಯಕ್ತಿಯ ಜೀವ ಹಾನಿಯಾಗಿತ್ತು. ಕುರಿ, ಆಡು, ಆಕಳು, ಎಮ್ಮೆ ಸೇರಿ 27 ಜಾನುವಾರು ಪ್ರಾಣ ಹಾನಿಯಾಗಿತ್ತು. ಮಾನವ ಪ್ರಾಣ ಹಾನಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, 27 ಜಾನುವಾರು ಜೀವ ಹಾನಿಗೆ 1.63 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು ಬಿದ್ದಿರುವ ಮನೆಗಳ ಪರಿಹಾರಕ್ಕಾಗಿ 600 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಪರ್ಯಾಸ ಎಂದರೆ ಸಮರ್ಪಕ ದಾಖಲೆ ಸೇರಿದಂತೆ ವಿವಿಧ ಕಾರಣಗಳಿಂದ ಬರೋಬ್ಬರಿ 277 ಅರ್ಜಿಗಳು ತಿರಸ್ಕೃತಗೊಂಡಿವೆ. ಸಣ್ಣ ಪುಟ್ಟ ಲೋಪದೋಷಗಳಿಂದ ಅರ್ಜಿ ತಿರಸ್ಕೃತ ಅರ್ಜಿ ಸರಿಪಡಿಸಿ ಸರಕಾರ ನೀಡುವ ಪರಿಹಾರಕ್ಕಾಗಿ ಜನರು ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದು, ಇನ್ನು ಎಲ್ಲವನ್ನೂ ಸಲ್ಲಿಸಿ ಬಿಡಿಗಾಸು ಪಡೆದವರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕುಂದಗೋಳದಲ್ಲಿ ಅಪಾರ ಅರ್ಜಿ ತಿರಸ್ಕೃತ: ಮುಂಗಾರು ಪೂರ್ವ ಮಳೆಯ ಹಾನಿಗೆ ಕುಂದಗೋಳ ಜನತೆ ಅಕ್ಷರಶಃ ನಲುಗಿದ್ದರು. ಈ ತಾಲೂಕಿನಲ್ಲಿ ಮನೆಗಳ ಪರಿಹಾರ ಕೋರಿ ಸಲ್ಲಿಕೆಯಾದ 222 ಅರ್ಜಿಗಳ ಪೈಕಿ 191 ತಿರಸ್ಕಾರಗೊಂಡಿವೆ. ನವಲಗುಂದ ತಾಲೂಕಿನಲ್ಲಿ 143 ಅರ್ಜಿಗಳ ಪೈಕಿ ಕೇವಲ 24 ಮಾತ್ರ ತಿರಸ್ಕೃತಗೊಂಡಿವೆ. ಉಳಿದಂತೆ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ವ್ಯಾಪ್ತಿಯಲ್ಲಿ 76 ಅರ್ಜಿಗಳು ಸಲ್ಲಿಕೆಯಾಗಿದ್ದವು, ಇದರಲ್ಲಿ 37 ತಿರಸ್ಕೃತಗೊಂಡಿವೆ. ಧಾರವಾಡ ತಾಲೂಕಿನಲ್ಲಿ 69 ಅರ್ಜಿಗಳ ಪೈಕಿ 13 ಮಾತ್ರ ತಿರಸ್ಕಾರಗೊಂಡಿವೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಹೆಚ್ಚು ಮನೆಗಳನ್ನು ಬಿದ್ದಿರುವ ಮನೆಗಳಿಗೆ ಐದೇ ಸಾವಿರ ಪರಿಹಾರ ಕಲ್ಲು ಹೊರ ಹಾಕುವ ಕೂಲಿಗೂ ಸಾಲಲ್ಲ ಸರಕಾರಕ್ಕೆ ಹಿಡಿಶಾಪ ಪರಿಹಾರಕ್ಕೆ ಗುರುತಿಸಲಾಗಿದೆ. ಆದರೆ ಕಾಂಗ್ರೆಸ್ ಶಾಸಕಿಯಾಗಿರುವ ಕುಂದಗೋಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಬಿಡಿಗಾಸಿನ ಪರಿಹಾರ: ಸಲ್ಲಿಕೆಯಾಗಿದ್ದ 600 ಅರ್ಜಿಗಳ ಪೈಕಿ 323 ಮಾತ್ರ ಪರಿಹಾರಕ್ಕೆ ಊರ್ಜಿತಗೊಂಡಿದ್ದು, ಇವುಗಳ ಪೈಕಿ 108 ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಇನ್ನು 215 ಮನೆಗಳಿಗೆ ಪರಿಹಾರ ನೀಡುವುದು ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಮೇಲ್ಛಾವಣಿ, ಮೂರು ಗೋಡೆ ಬಿದ್ದು ಒಂದು ಗೋಡೆ ಉಳಿದರೆ ಅದನ್ನು ಅಧಿಕಾರಿಗಳು ಭಾಗಶಃ ಎಂದು ಪರಿಗಣಿಸಿದ್ದಾರೆ ಎನ್ನುವ ಆಕ್ರೋಶ ಜನರಲ್ಲಿದೆ. ಮಾಳಿಗೆ, ಮೂರು ಗೋಡೆ ಬಿದ್ದ ಮನೆಗೆ ಗರಿಷ್ಠ ಐದು ಸಾವಿರ ರೂ. ಪರಿಹಾರ ವಿತರಿಸಲಾಗುತ್ತಿದೆ. ಒಂದು ಮಾನವ ಪ್ರಾಣ ಹಾನಿ, 27 ಜಾನುವಾರುಗಳ ಜೀವ ಹಾನಿ ಸೇರಿ 6.63 ಲಕ್ಷ ರೂ. ಪರಿಹಾರ ವಿತರಿಸಿದ್ದರೆ ಬಿದ್ದ 108 ಮನೆಗಳಿಗೆ 5.47 ಲಕ್ಷ ರೂ. ಬಿಡಿಗಾಸಿನ ಪರಿಹಾರ ವಿತರಿಸಲಾಗಿದೆ.
ಪರಿಹಾರದಲ್ಲಿ ತಾರತಮ್ಯ: 2019-20ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಉತ್ತಮ ಪರಿಹಾರ ಘೋಷಿಸಿದ್ದರು. ಕನಿಷ್ಠ ನಾಲ್ಕು ಗೋಡೆ, ತಗಡಿನ ಶೀಟು ಹಾಕಿಕೊಳ್ಳುವುದಕ್ಕಾದರೂ ಅನುಕೂಲವಾಯಿತು. ಕೆಲವರು ಇದಕ್ಕೆ ಇನ್ನೊಂದಿಷ್ಟು ಹಣ ಹಾಕಿ ಮನೆ ಮಾಡಿಕೊಂಡರು. ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹಿಂದಿನ ಘೋಷಣೆ ಮುಂದುವರಿಸುತ್ತಾರೆ ಇದರಿಂದ ಸಣ್ಣ ಮನೆಯಾದರೂ ಕಟ್ಟಿಕೊಳ್ಳಬಹುದು ಎಂದು ಕನಸು ಕಂಡವರ ಖಾತೆಗೆ ಬಿಡಿಗಾಸಿನ ಪರಿಹಾರ ಜಮೆಯಾಗುತ್ತಿದೆ. ಈ ತಾರತಮ್ಯ ಖಂಡಿಸಿ ಕೆಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಹಶೀಲ್ದಾರ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಮೂರ್‍ನಾಲ್ಕು ಸಾವಿರ ರೂ. ಪರಿಹಾರ ಯಾವುದಕ್ಕೆ ಸಾಲುತ್ತದೆ ಎಂದು ತಹಶೀಲ್ದಾರರನ್ನು ಪ್ರಶ್ನಿಸಿದ್ದೇನೆ. ಇದು ಸರಕಾರದ ಮಾನದಂಡ ಹಾಗೂ ಮಾರ್ಗಸೂಚಿ ಹೇಳುತ್ತಿದ್ದಾರೆ. ಬಿಡಿಗಾಸು ನೀಡುವ ಬದಲು ಯಾವುದೇ ಪರಿಹಾರ ನೀಡಲ್ಲ ಎಂದು ಹೇಳಿದರೆ ಉತ್ತಮ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಬೇರೆ ತಾಲೂಕಿಗೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ. ಕೇಳಿದರೆ ದಾಖಲೆ ಸರಿಯಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಕುರಿತು ಕೇಳಬೇಕಾಗಿದೆ.
-ಕುಸುಮಾವತಿ ಶಿವಳ್ಳಿ, ಕುಂದಗೋಳ ಶಾಸಕಿ
ಹಿಂದಿನ ಮಳೆಗಾಲದ ಇಷ್ಟೇ ಬಿದ್ದ ಮನೆಗಳಿಗೆ ಹಿಂದೆ 2.3 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಆದರೆ ಈ ಬಾರಿ ಬಿದ್ದ ಮನೆಗಳಿಗೆ 3200-5200 ರೂ. ವರೆಗೆ ನೀಡುತ್ತಿದ್ದಾರೆ. ನಮ್ಮೂರಿನಲ್ಲಿ ಇನ್ನೂ ಕೆಲವರಿಗೆ ಪರಿಹಾರ ಬಂದಿಲ್ಲ. ಕೊಟ್ಟಿರುವ ಪರಿಹಾರ ಗೋಡೆಯ ಕಲ್ಲು ತೆಗೆಸಲು ಸಾಲಲ್ಲ. ಸರಕಾರ ಮನೆ ಕಟ್ಟಿಸಿಕೊಡಬೇಕು ಇಲ್ಲವೇ ಹಿಂದಿನ ರೀತಿ ಬಿದ್ದ ಮನೆ ಪರಿಶೀಲಿಸಿ ಉತ್ತಮ ಪರಿಹಾರ ನೀಡಬೇಕು. –
ಫಕೀರಪ್ಪ ಚಾಕಲಬ್ಬಿ, ಮನೆ ಕಳೆದುಕೊಂಡವರು
-ಹೇಮರಡ್ಡಿ ಸೈದಾಪುರ