ನವದೆಹಲಿ:ವಿತ್ತೀಯ ಪರಿಹಾರ ಎಷ್ಟೇ ನೀಡಿದರೂ ಅಪಘಾತದಿಂದ ಉಂಟಾದ ಆಘಾತ, ನಷ್ಟ ಹಾಗೂ ನೋವನ್ನು ತುಂಬಿಕೊಡಲು ಸಾಧ್ಯವಿಲ್ಲ. ಅಂಥ ಪರಿಹಾರ ಏನಿದ್ದರೂ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ನೀಡಬಹುದಾದ ಸಾಂತ್ವನದ ಒಂದು ಭಾಗ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕರ್ನಾಟಕದ ಬೀದರ್‌ನಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಸಂದರ್ಭದಲ್ಲಿ ಗಾಯಗೊಂಡಿದ್ದ ಮಹಿಳೆಗೆ 9.30 ಲಕ್ಷ ರೂ. ಪರಿಹಾರ ನೀಡುವ ವೇಳೆ ನ್ಯಾ.ಕೃಷ್ಣ ಮುರಾರಿ ಮತ್ತು ನ್ಯಾ.ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಅಪಘಾತವೋ ಅಥವಾ ಯಾವುದೇ ದುರಂತದಿಂದ ಉಂಟಾದ ಗಾಯ ಅಥವಾ ತಮ್ಮವರನ್ನು ಕಳೆದುಕೊಂಡು ಉಂಟಾಗುವ ನೋವು ಮತ್ತು ಆಘಾತ ಸಹಿಸಲು ಅಸಾಧ್ಯವಾದದ್ದು. ಆ ನಷ್ಟವನ್ನು ಸರ್ಕಾರದ ವತಿಯಿಂದ ನೀಡುವ ವಿತ್ತೀಯ ಪರಿಹಾರದ ಮೊತ್ತದಿಂದ ಭರಿಸಲು ಸಾಧ್ಯವೇ ಇಲ್ಲ. ಅದೇನಿದ್ದರೂ, ಕಾನೂನಾತ್ಮಕವಾಗಿ ಮತ್ತು ಸಾಮಾಜಿಕ ನೆಲೆಯಲ್ಲಿ ಹೇಳಬಹುದಾದ ಸಾಂತ್ವನದ ಮಾರ್ಗ. ಏನೇ ಪರಿಹಾರ ನೀಡಿದರೂ, ನೊಂದವರು ಪರಿಸ್ಥಿತಿಯನ್ನು ಎದುರಿಸಲೇಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
2015ರ ಜು.22ರಂದು ಈ ಘಟನೆ ನಡೆದಿತ್ತು. ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಬೆನ್ನುಹುರಿ ಮತ್ತು ದೇಹದ ಇತರ ಭಾಗಗಳಿಗೆ ಕೂಡ ಹಾನಿಯಾಗಿತು ಎಂದು ಹೇಳಿದ್ದರು. ಇಂಥ ಸಂದರ್ಭದಲ್ಲಿ ಮಹಿಳೆಗೆ ಪರಿಹಾರವನ್ನು ನೀಡಲೇಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.