ವಿಜಯಪುರ: ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಸಂತ್ರಸ್ತರ ಬದುಕು ಬೀದಿಪಾಲಾಗಿದೆ. ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರು ಕಣ್ಣೀರು ಹಾಕುತ್ತಿರುವ ಸಂದರ್ಭ ಯಾರೂ ಹಗುರವಾಗಿ ಮಾತನಾಡಬಾರದು. ಇಷ್ಟಕ್ಕೂ ಸಂತ್ರಸ್ತರಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಭಿಕ್ಷೆಯಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರು ಸಂಕಷ್ಟದಲ್ಲಿರುವಾಗ ಎಲ್ಲೋ ಕುಳಿತ ಕೆಲವರು ಕೇಂದ್ರದಿಂದ ಅನುದಾನದ ಅವಶ್ಯಕತೆ ಇಲ್ಲವೆಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಸಂತ್ರಸ್ತರು ಕೇಂದ್ರದಿಂದ ಪರಿಹಾರ ಧನ ಕೇಳುತ್ತಿದ್ದಾರೆಯೇ ಹೊರತು ಭಿಕ್ಷೆಯನ್ನಲ್ಲ. ರಾಜ್ಯದ ಜನರು ಮೋದಿ ಅವರ ಕೈ ಬಲಪಡಿಸಲೆಂದೇ ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಕೂಡಲೇ ಬೇಜವಾಬ್ದಾರಿ ಹೇಳಿಕೆ ಹಿಂಪಡೆಯಬೇಕು ಎಂದರು.
ಒಗ್ಗೂಡಿ ಒತ್ತಡ ತರಲಿ: ಉತ್ತರ ಕರ್ನಾಟಕದ ಜನರ ಮನೆಗಳು, ಬೆಳೆದು ನಿಂತಿದ್ದ ಬೆಳೆಗಳು, ಫಲವತ್ತಾದ ಮಣ್ಣು ಎಲ್ಲವೂ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿದ್ದು, ಆಡಳಿತ ಪಕ್ಷದ ಶಾಸಕನೇ ಆಗಿದ್ದರೂ ಸಂಕಷ್ಟದಲ್ಲಿರುವ ಜನರ ಪರ ಧ್ವನಿ ಎತ್ತುವುದು ನನ್ನ ಕರ್ತವ್ಯ. ಪರಿಹಾರಕ್ಕಾಗಿ ನಮ್ಮ ಎಲ್ಲ ಸಂಸದರೂ ಒಗ್ಗೂಡಿ ಪ್ರಧಾನಿಗೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಫೋನ್ ಕದ್ದಾಲಿಕೆ, ಅದರಲ್ಲೂ ಆದಿಚುಂಚನಗಿರಿ ಶ್ರೀಗಳಂಥ ಸಂತರ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆಂಬುದು ನಿಜಕ್ಕೂ ನೋವಿನ ಸಂಗತಿ ಹಾಗೂ ಸಮಾಜಕ್ಕೆ ಮಾಡಿದ ಅಪಮಾನ. ಶ್ರೀಗಳು ಸೇರಿ ಗಣ್ಯರ ಫೋನ್ ಕದ್ದಾಲಿಕೆ ಮಾಡಿರುವುದು ಕೀಳುಮಟ್ಟದ ರಾಜಕೀಯ ಹಾಗೂ ರಾಜಕೀಯ ವ್ಯಭಿಚಾರ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ