Advertisement

ಜೆಡಿಎಸ್‌ ಜತೆ ಹೊಂದಾಣಿಕೆ ಅನಿವಾರ್ಯ

06:00 AM Jun 03, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸುವುದು ಅನಿವಾರ್ಯವಾಗಿತ್ತು. ರಾಷ್ಟ್ರಮಟ್ಟದ ಬೆಳವಣಿಗೆ ಹಿನ್ನೆಲೆಯಲ್ಲಿ ಇದು ಬಿಟ್ಟು ಬೇರೆ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌
ಸಮರ್ಥಿಸಿಕೊಂಡಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಫ‌ಲಿತಾಂಶದ ನಂತರ ನಡೆದ ಪಕ್ಷದ ಪದಾಧಿಕಾರಿಗಳ ಮೊದಲ ಸಭೆಯಲ್ಲಿ ಮಾತನಾಡಿದ
ಅವರು, ಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧವೂ ಹೋರಾಟ ಮಾಡಿದ್ದು ನಿಜ. ಕೆಲವರಿಗೆ ಸರ್ಕಾರ ರಚನೆ ಬಗ್ಗೆ
ಬೇಸರ ಅಥವಾ ನೋವು ಇರಬಹುದು. ಆದರೆ, ಹೈಕಮಾಂಡ್‌ ತೀರ್ಮಾನವನ್ನು ಎಲ್ಲರೂ ಒಪ್ಪಲೇಬೇಕಾಗಿದೆ
ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅನಿವಾರ್ಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಜತೆ ಕೈ ಜೋಡಿಸಿದ್ದೇವೆ. ರಾಷ್ಟ್ರೀಯ ಪಕ್ಷವಾಗಿ ಸಣ್ಣ ಪಕ್ಷದ ಮಾತು
ಕೇಳಬೇಕಾಗಿರುವುದು ನಿಜಕ್ಕೂ ನೋವಿನ ಸಂಗತಿ. ಮುಖ್ಯಮಂತ್ರಿ ಸ್ಥಾನವನ್ನು ಅವರಿಗೇ ಬಿಟ್ಟುಕೊಟ್ಟಿದ್ದೇವೆ
ಎನ್ನುವುದಕ್ಕಿಂತ ಇನ್ನೊಂದು ನೋವಿನ ವಿಷಯ ಏನಿದೆ ಹೇಳಿ ಎಂದು ಪರಮೇಶ್ವರ್‌ ಕಾರ್ಯಕರ್ತರನ್ನೇ ಪ್ರಶ್ನಿಸಿದರು
ಎಂದು ಹೇಳಲಾಗಿದೆ.

ಪ್ರಮುಖ ಖಾತೆಗಳನ್ನು ಜೆಡಿಎಸ್‌ನವರೇ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಾರದಿರುವುದೇ ಕಾರಣ. ಆದರೆ, ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಗೆದ್ದರೆ, ನಮ್ಮ ಧ್ವನಿ ಗಟ್ಟಿಯಾಗುತ್ತದೆ.

ಐದು ವರ್ಷ ಜೆಡಿಎಸ್‌ಗೆ ಸಿಎಂ ಸ್ಥಾನ ಬಿಟ್ಟು ಕೊಡಲು ಹೈಕಮಾಂಡ್‌ ಸೂಚಿಸಿರುವುದರಿಂದ ಅವರ ಮಾತು ನಾವು
ಕೇಳಲೇಬೇಕಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡಲು ಈ ಹೊಂದಾಣಿಕೆ ಅನಿವಾರ್ಯ ಎಂದರು ಎನ್ನಲಾಗಿದೆ.

Advertisement

ಲೋಕಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಜೆಡಿಎಸ್‌ನೊಂದಿಗೆ ಮೈತ್ರಿ
ಮುಂದುವರಿಯಲಿದೆ, ಅದಕ್ಕಾಗಿ ಜಿಲ್ಲಾಮಟ್ಟದಲ್ಲಿ ಜಂಟಿಯಾಗಿ ಹೋರಾಟ ನಡೆಸುವಂತೆ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಐದು ವರ್ಷ ಉತ್ತಮ ಆಡಳಿತ ನೀಡಿದ್ದರೂ, ಕಾಂಗ್ರೆಸ್‌ಗೆ
ಹಿನ್ನಡೆಯಾಗಲು ಕಾರಣಗಳೇನೆಂದು ವರದಿ ನೀಡುವಂತೆ ಜಿಲ್ಲಾಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಪರಮೇಶ್ವರ್‌
ಸೂಚಿಸಿದರು.

ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು.
ರಾಮನಗರ ಮತ್ತು ಜಮಖಂಡಿ ಉಪ ಚುನಾವಣೆ ಮೈತ್ರಿ ಬಗ್ಗೆ ಹೈಕಮಾಂಡ್‌ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಚುನಾವಣೆಯಲ್ಲಿ ಪ್ರಮುಖ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಕಾಂಗ್ರೆಸ್‌ನಿಂದ ದೂರ ಉಳಿದಿರುವುದಕ್ಕೆ ಕಾರಣ ಹುಡುಕಿ, ಆ ಸಮುದಾಯಗಳ ವಿಶ್ವಾಸ ಗಳಿಸಿ ಎಂದು ತಿಳಿಸಿದರು ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಶ್ರದ್ಧಾಂಜಲಿ
ಅರ್ಪಿಸಲಾಯಿತು. ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಪರಮೇಶ್ವರ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿಗಮ ಮಂಡಳಿಗೆ ಶೀಘ್ರ ನೇಮಕ
ಹೊಸ ಸರ್ಕಾರ ರಚನೆಯಾಗಿರುವುದರಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ನಿಗಮ
ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಭರವಸೆ ನೀಡಿರುವ ಪರಮೇಶ್ವರ್‌, ಜಿಲ್ಲಾಮಟ್ಟದ ಕಾರ್ಯಕರ್ತರ ಪಟ್ಟಿ
ನೀಡುವಂತೆ ಜಿಲ್ಲಾಧ್ಯಕ್ಷರಿಗೆ ನಿರ್ದೇಶಿಸಿದರು. ವಿಧಾನಸಭೆ ಚುನಾವಣೆಗೆ ಟಿಕೆಟ್‌ ಪಡೆದು ಸೋತವರು, ಮಾಜಿ
ಶಾಸಕರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದವರಿಗೆ ಮತ್ತೆ
ಅವಕಾಶ ನೀಡಬಾರದು ಎಂದು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣವಾದ ವರದಿ ನೀಡುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ.
ಮುಂಬರುವ ಚುನಾವಣೆಗೆ ಪಕ್ಷ ಸಂಘಟಿಸಲು ಸೂಚಿಸಲಾಗಿದೆ. ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದವರ ಪಟ್ಟಿ ನೀಡುವಂತೆ ಸೂಚಿಸಲಾಗಿದ್ದು, ನಿಗಮ ಮಂಡಳಿಗೆ ಶೀಘ್ರವೇ ನೇಮಕ ಮಾಡಲಾಗುವುದು.

– ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಲಕ್ಷ್ಮೀ ಹೆಬ್ಟಾಳ್ಕರ್‌ ಸಚಿವರಾಗುವುದಕ್ಕೆ ನಮ್ಮ ವಿರೋಧವಿಲ್ಲ. ಸಚಿವ ಸ್ಥಾನಕ್ಕಾಗಿ ನಾವು ಯಾರಿಗೂ ಕೇಳಿಲ್ಲ. ಯಾರಿಗೂ ವಿರೋಧ ವ್ಯಕ್ತಪಡಿಸಿಲ್ಲ. ಇಂತದ್ದೇ ಖಾತೆ ನೀಡಿ ಎಂದು ಬೇಡಿಕೆ ಇಟ್ಟಿಲ್ಲ. ಅದನ್ನು ರಾಹುಲ್‌ ಗಾಂಧಿ ತೀರ್ಮಾನಿಸುತ್ತಾರೆ. ಯಾವ ಖಾತೆಕೊಟ್ಟರೂ ನಿಭಾಯಿಸಲು ಸಿದ್ಧ 
– ಸತೀಶ ಜಾರಕಿಹೊಳಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next