ಧಾರವಾಡ: ಶಿಕ್ಷಣ ಇಲಾಖೆಯ ಸೇವೆಯಲ್ಲಿರುವಾಗಲೇ ಮೃತರಾದ ನೌಕರರ ಪತ್ನಿ ಇಲ್ಲವೇ ಮಕ್ಕಳಿಗೆ ಅನುಕಂಪ ಆಧಾರದ ಅಡಿಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲದಂತೆ
ಏಕಕಾಲಕ್ಕೆ 32 ಜನರಿಗೆ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಬೆಳಗಾವಿ ವಿಭಾಗ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಖಾಲಿ ಇದ್ದ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಡಿ ದರ್ಜೆ ನೌಕರರ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದ್ದು, ಮೊದಲಿಗೆ ಮಹಿಳೆಯರಿಗೆ ಆದ್ಯತೆ ನಿಡಲಾಯಿತು. 32 ಜನರ ಅನುಕಂಪ ಆಧಾರದ ನೇಮಕಾತಿ ಪ್ರಸ್ತಾವನೆಗಳ ಪೈಕಿ 26 ಪ್ರಸ್ತಾವನೆಗಳನ್ನು ಕೆಲವೇ ತಿಂಗಳಲ್ಲಿ ಅತಿ ಶೀಘ್ರವಾಗಿ ವಿಲೇವಾರಿ ಮಾಡಿ ಏಕಕಾಲಕ್ಕೆ ನೇಮಕದ ಆದೇಶಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿದೆ.
ನೇಮಕಾತಿ ಆದೇಶಗಳನ್ನು ವಿತರಿಸಿದ ಬಳಿಕ ಮಾತನಾಡಿದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಈ ಹಿಂದೆ ಇಲಾಖೆಯಲ್ಲಿ ಅನುಕಂಪ ಆಧಾರದ ನೇಮಕಾತಿಗಾಗಿ ಲಕ್ಷಾಂತರ ರೂ.ಗಳ ಭ್ರಷ್ಟಾಚಾರ ನಡೆದಿದ್ದನ್ನು ತನಿಖೆ ಮೂಲಕ ಪತ್ತೆ ಹಚ್ಚಿದ್ದು, ಕೆಲವು ಸಿಬ್ಬಂದಿಯನ್ನು ಅಮಾನತು ಕೂಡ ಮಾಡಲಾಗಿದೆ. ಪ್ರಸ್ತುತ ಬೆಳಗಾವಿ ವಿಭಾಗ ವ್ಯಾಪ್ತಿಯ ಎಲ್ಲ ಅನುಕಂಪ ಆಧಾರದ ನೇಮಕಾತಿ ಪ್ರಸ್ತಾವನೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಒಂದೇ ಕಂತಿನಲ್ಲಿ ಆದೇಶ ನೀಡಲಾಗಿದೆ ಎಂದರು.
ನನ್ನ ಅಧಿಕಾರದ ಈ 21 ತಿಂಗಳುಗಳಲ್ಲಿ ಒಟ್ಟು 250 ಜನರನ್ನು ಅನುಕಂಪದ ಆಧಾರದಲ್ಲಿ ನೇರ ನೇಮಕಾತಿ ಮಾಡಲಾಗಿದ್ದು, ಈ ಪೈಕಿ 70 ಪ್ರಥಮ ದರ್ಜೆ ಸಹಾಯಕರು, 95 ದ್ವಿತೀಯ ದರ್ಜೆ ಸಹಾಯಕರು ಹಾಗೂ 85 ಡಿ ದರ್ಜೆ ನೌಕರರ ನೇಮಕಾತಿ ಆದೇಶ ನೀಡಲಾಗಿದೆ. ಈ ಹಂತದಲ್ಲಿ ತಮ್ಮ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಸಕಾಲಿಕ ಸ್ಪಂದನೆ ನೀಡಿದ್ದಾರೆ ಎಂದರು. ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕ ಡಾ| ಬಿ.ಕೆ.ಎಸ್. ವರ್ಧನ್ ಮಾತನಾಡಿದರು. ಉಪನಿರ್ದೇಶಕ ಮೃತ್ಯುಂಜಯ ಕುಂದಗೋಳ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಕಚೇರಿ ಅಧೀಕ್ಷಕಿ ಎಸ್. ಎಚ್. ಶಾಮಲಾ ನಾಗರಾಜ್, ವೈ.ಎ. ಹಳೆಮನಿ, ದಯಾನಂದ ಪಟ್ಟಣಶೆಟ್ಟಿ ಇದ್ದರು.