ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಮತ ದೃಢೀಕರಣ ಯಂತ್ರ(ವಿವಿಪ್ಯಾಟ್)ಗಳಲ್ಲಿನ ಮತಗಳನ್ನು ಹೋಲಿಕೆ ಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಪಕ್ಷಗಳಿಗೆ ಹಿನ್ನಡೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ಕನಿಷ್ಠ ಶೇ.25ರಷ್ಟು ಮತಗಳನ್ನು ಹೋಲಿಕೆ ಮಾಡಬೇಕು ಎಂದು ಕೋರಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ವಿಪಕ್ಷಗಳು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ವಿಚಾರಣೆ ಆರಂಭವಾದ ಕೇವಲ ಒಂದು ನಿಮಿಷದಲ್ಲೇ ಅರ್ಜಿಯನ್ನು ವಜಾ ಮಾಡಿದ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಎ.8ರಂದು ತಾವು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ನುಡಿದಿದೆ.
ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ನ ಮತಗಳ ಹೋಲಿಕೆಗೆ ಎ.8ರ ತೀರ್ಪಿನಲ್ಲಿ ಅವಕಾಶ ಕಲ್ಪಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ಶೇ.2ರಷ್ಟು ಮತಗಳನ್ನು ಹೋಲಿಕೆ ಮಾಡುವಂತೆ ನಿರ್ದೇಶಿ ಸಿತ್ತು. ಆದರೆ ಇದರಿಂದ ಸಮಾಧಾನಗೊಳ್ಳದ ವಿಪಕ್ಷಗಳು, ಮತ್ತೂಮ್ಮೆ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದವು. ಶೇ.50ರಷ್ಟು ಮತಗಳನ್ನು ಹೋಲಿಕೆ ಮಾಡಬೇಕು ಎಂದು ಮನವಿ ಮಾಡಿದ್ದವು. ಮಂಗಳವಾರದ ವಿಚಾರಣೆ ವೇಳೆ ವಿಪಕ್ಷಗಳ ಪರ ವಕೀಲ ಅಭಿಷೇಕ್ ಮನು ಸಿಂ Ì, “ನಾವು ಶೇ.50ರಷ್ಟು ಮತಗಳ ಹೋಲಿಕೆಗೆ ಕೇಳಿಕೊಂಡಿದ್ದೇವೆ. ಕನಿಷ್ಠ ಪಕ್ಷ ಶೇ.25ಕ್ಕಾದರೂ ಒಪ್ಪಬೇಕು’ ಎಂದು ನ್ಯಾಯಪೀಠವನ್ನು ಕೋರಿದರು. ಅದಕ್ಕೆ ನ್ಯಾಯಪೀಠ ಒಪ್ಪಲಿಲ್ಲ.
ನಮ್ಮ ಹೋರಾಟ ಮುಂದುವರಿಯಲಿದೆ
ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, “ಚುನಾವಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಅದು ಇನ್ನೂ ಮುಂದುವರಿಯಲಿದೆ’ ಎಂದಿದ್ದಾರೆ.
20,600 ಮತಗಟ್ಟೆಗಳಲ್ಲಿ ಪ್ರಕ್ರಿಯೆ
ಎ.8ರ ಆದೇಶವೇ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಕಾರಣ ಈ ಲೋಕಸಭೆ ಚುನಾವಣೆಯ ಮತ ಎಣಿಕೆ ದಿನವಾದ ಮೇ 23ರಂದು ದೇಶಾದ್ಯಂತ ಒಟ್ಟು 20,600 ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಮತಗಳ ತುಲನೆ ನಡೆಯಲಿದೆ ಎಂದು ಚುನಾವಣ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಒಟ್ಟಾರೆ 10.35 ಲಕ್ಷ ಮತಗಟ್ಟೆಗಳು ಇರಲಿವೆ. ಪ್ರತಿ ಅಸೆಂಬ್ಲಿ ಕ್ಷೇತ್ರದ ತಲಾ 5 ಮತಗಟ್ಟೆಗಳ ಶೇ. 2ರಷ್ಟು ಮತಗಳ ಹೋಲಿಕೆಗೆ ನ್ಯಾಯಾಲಯ ಆದೇಶಿಸಿರುವ ಕಾರಣ 20,600 ಮತಗಟ್ಟೆಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.