ನವದೆಹಲಿ: ಫೆ.29ರ ನಂತರವೂ ಡಿಜಿಟಲ್ ಪೇಮೆಂಟ್ ಮತ್ತು ಸೇವಾ ಆ್ಯಪ್ “ಪೇಟಿಎಂ’ ಎಂದಿನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ಪೇಟಿಎಂ ಮಾಲೀಕತ್ವದ ಒನ್97 ಕಮ್ಯೂನಿಕೇಷನ್ಸ್ ಲಿ.(ಒಸಿಎಲ್) ಸಂಸ್ಥಾಪಕ, ಸಿಇಒ ವಿಜಯ್ ಶೇಖರ್ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.
ಫೆ.29ರ ನಂತರ ಪೇಟಿಎಂ ಗ್ರಾಹಕರ ಪ್ರೀಪೇಯ್ಡ ಪೇಮೆಂಟ್, ವ್ಯಾಲೆಟ್, ಫಾಸ್ಟ್‌ಟ್ಯಾಗ್ ಖಾತೆಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.(ಪಿಪಿಬಿಎಲ್)ಗೆ ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಶರ್ಮಾ ಈ ಮಾಹಿತಿ ನೀಡಿದ್ದಾರೆ.
“ಕಂಪನಿಯು ದೇಶಕ್ಕೆ ಸೇವೆ ಸಲ್ಲಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಫೆ.29ರ ನಂತರವೂ ಪೇಟಿಎಂ ಆ್ಯಪ್ ಕಾರ್ಯನಿರ್ವಹಿಸಲಿದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿರಲಿದೆ. ನಿಮ್ಮ ಹಣವು ಸುರಕ್ಷಿತವಾಗಿರಲಿದೆ. ನಾವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಅಲ್ಲದೇ ಬೇರೆ ಬ್ಯಾಂಕ್‌ಗಳ ಜತೆಯೂ ಸಹಭಾಗಿತ್ವ ಹೊಂದಿದ್ದೇವೆ. ಹೀಗಾಗಿ ನಮ್ಮ ಸೇವೆಗಳು ಮುಂದುವರಿಯಲಿವೆ’ ಎಂದು ಶರ್ಮಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಪಿಪಿಬಿಎಲ್‌ನಲ್ಲಿ ಶೇ.49ರಷ್ಟು ಪಾಲನ್ನು ಒಸಿಎಲ್ ಹೊಂದಿದೆ. ಅದನ್ನು ತನ್ನ ಅಂಗಸಂಸ್ಥೆಯಾಗಿ ಅಲ್ಲ, ಬದಲಾಗಿ ತನ್ನ ಸಹವರ್ತಿ ಸಂಸ್ಥೆ ಎಂದು ಒಸಿಎಲ್ ಪರಿಗಣಿಸುತ್ತದೆ.
ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿ ಹೊರತುಪಡಿಸಿ ಯಾವುದೇ ಗ್ರಾಹಕರ ಖಾತೆ, ಪ್ರೀಪೇಯ್ಡ ಪೇಮೆಂಟ್, ವ್ಯಾಲೆಟ್, ಫಾಸ್ಟ್‌ಟ್ಯಾಗ್, ಎನ್‌ಸಿಎಂಸಿ ಕಾರ್ಡ್, ಇತರೆ ಖಾತೆಗಳಲ್ಲಿ ಫೆ.29ರಿಂದ ಠೇವಣಿ, ಸಾಲದ ವ್ಯವಹಾರ, ಟಾಪ್ ಅಪ್ ವ್ಯವಹಾರ ಮಾಡದಂತೆ ಪಿಪಿಬಿಎಲ್‌ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ.