ಬಾಗಲಕೋಟೆ: ನೈಜ ವಾರಸುದಾರರಿಗೆ ಭೂ ಪರಿಹಾರ ನೀಡದೇ ಬೇರೆಯವರಿಗೆ ಪರಿಹಾರಧನ ಪಾವತಿಸಿದ ಲೋಪ ಸರಿಪಡಿಸದ ಹಿನ್ನೆಲೆಯಲ್ಲಿ ಇಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ವಿವಿಧ ಪೀಠೊಪಕರಣಗಳನ್ನು ಬುಧವಾರ ಜಪ್ತಿ ಮಾಡಲಾಯಿತು. ಇಲ್ಲಿನ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಪ್ರಶಾಂತ ಚಟ್ನಿ ಆದೇಶದನ್ವಯ ಈ ಜಪ್ತಿ ಪ್ರಕ್ರಿಯೆ ನಡೆಸಲಾಯಿತು.
ಪ್ರಕರಣದ ವಿವರ:
ತಾಲೂಕಿನ ಸೀಮಿಕೇರಿ ಗ್ರಾಮದ ರಿ.ಸ ನಂ.248/184 ಎಕರೆ ಜಮೀನಿಗೆ ಶೇಷಗಿರಿರಾವ ಸರದೇಸಾಯಿ ವಾರಸುದಾರರಿದ್ದು, ಅವರು ಅದನ್ನು ಸಾಬಣ್ಣ ಕೆಂಚಣ್ಣವರ ಅವರಿಗೆ ಹಸ್ತಾಂತರಿಸಿ ದಾಖಲೂ ಮಾಡಲಾಯಿತು. ಅವರ ನಿಧನದ ನಂತರ ಪತ್ನಿ ಹೆಸರಿಗೆ ಹಸ್ತಾಂತರವಾಗಿತ್ತು. ಅವರೂ ನಿಧನದರಾದ ನಂತರ ವಾರಸುದಾರರಾದರು ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ 4 ಎಕರೆ ಪೈಕಿ 3.26 ಗುಂಟೆ ಪುನರ್ವಸತಿ ಕೇಂದ್ರಕ್ಕೆ ಸ್ವಾಧೀನಗೊಂಡಿದ್ದು, 12 ಗುಂಟೆ ಅವರ ಹೆಸರಿನಲ್ಲಿದೆ.
ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರಧನ ಕೊಟ್ಟಿಲ್ಲ ಎಂದು ಕಚೇರಿ ಸಂಪರ್ಕಿಸಿದಾಗ ಪರಿಹಾರಧನ ತಪ್ಪಿನಿಂದಾಗಿ ಅದು ಬೇರೆಯ ವರಿಗೆ ಪಾವತಿಯಾಗಿದ್ದು, ಬೆಳಕಿಗೆ ಬಂದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಅದನ್ನು ಸರಿಪಡಿಸುವ ಭರವಸೆ ಕಾರ್ಯಗತಗೊಳ್ಳದಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಈ ಕಾರಣಕ್ಕೆ ನ್ಯಾಯಾಲಯ ಎಸ್‌ಎಲ್‌ಎಒ ಕಚೇರಿ ಜಪ್ತಿಗೆ ಆದೇಶ ನೀಡಿದ್ದು, ಸೋಮವಾರ ಮಧ್ಯಾಹ್ನ ಜಪ್ತಿ ಮಾಡಲಾಯಿತು. ಪ್ರತಿವಾದಿಗಳ ಪರವಾಗಿ ಈರಣ್ಣ ಕಲ್ಯಾಣಿ ವಕಾಲತ್ತು ವಹಿಸಿದ್ದರು.