Advertisement

ಸಹೃದಯಿ ಸಂಶೋಧಕ

10:26 AM Mar 09, 2020 | mahesh |

ಭಾರತೀಯ ಇತಿಹಾಸಕಾರರ ಪಂಕ್ತಿಯಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಿದ
ಪ್ರೊ. ಷಡಕ್ಷರಪ್ಪ ಶೆಟ್ಟರ್‌ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಹಳಗನ್ನಡ ಕಾವ್ಯಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಷ. ಶೆಟ್ಟರ್‌ ಅವರು ಇತಿಹಾಸ-ಸಾಹಿತ್ಯ-ಸಂಶೋಧನ ಕ್ಷೇತ್ರಗಳ ನಡುವಿನ ವಿಭಾಜಕ ರೇಖೆಯನ್ನು ತೆಳುವಾಗಿಸಿದವರು. ಸಾಹಿತ್ಯೇತರ ಕ್ಷೇತ್ರದವರಾಗಿದ್ದೂ ಕನ್ನಡ ಸಾಹಿತ್ಯ ಸಮ್ಮೇಳನದ ಅಗ್ರಪೀಠವನ್ನು ಅಲಂಕರಿಸಬಹುದಾದ ವರ್ಚಸ್ಸು ಅವರದಾಗಿತ್ತು.

Advertisement

ಒಮ್ಮೆ ಪ್ರೊ. ಶೆಟ್ಟರ್‌ ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯೊಬ್ಬ ಬಂದು “ಎಷ್ಟು ರೊಕ್ಕಕ್ಕೆ ನಿಮ್ಮನ್ನು ಮಾರಿಕೊಂಡಿರಿ? ಎಂದ. ಶೆಟ್ಟರ್‌ ಅವರಿಗೆ ಆಶ್ಚರ್ಯ. “ಯಾಕೆ? ಏನಾಯಿತು?’ ಎಂದು ಕೇಳಿದರು. “ದಡ್ಡನಿಗೆ ಕೆಲಸ ಕೊಟ್ಟಿರಲ್ಲ’ ಎಂದ ಅವನ ಸಿಟ್ಟಿನ್ನೂ ಕಡಿಮೆಯಾಗಿರಲಿಲ್ಲ. ಶೆಟ್ಟರ್‌ ಒಂದು ನಿಮಿಷ ಸುಮ್ಮನೆ ಕುಳಿತರು. ತತ್‌ಕ್ಷಣ ತಾವು ಕೆಲ ವಾರಗಳ ಹಿಂದೆ ಕೆಪಿಎಸ್‌ಸಿ ಅಭ್ಯರ್ಥಿಗಳ ಸಂದರ್ಶನಕ್ಕೆ ವಿಷಯ ಪರಿಣತರಾಗಿ ನೆನಪಿಗೆ ಬಂತು. “ನಾನು ಸರಿಯಾಗಿಯೇ ಮಾರ್ಕ್ಸ್ ಕೊಟ್ಟಿದ್ದೆನಲ್ಲ. ಹೀಗಾಗಲು ಸಾಧ್ಯವೇ ಇಲ್ಲ’ ಎಂದರು ಶೆಟ್ಟರ್‌. ಆ ಹುಡುಗ ಎದ್ದುಹೋದ. ಅಲ್ಲಿ ಅಧಿಕಾರಿಗಳು, “ಪೆನ್ಸಿಲ್‌ನಲ್ಲಿ ಅಂಕ ಹಾಕಿ’ ಎಂದದ್ದು ನೆನಪಾಯಿತು. ತಾವು ಹಾಕಿದ್ದ ಅಂಕವನ್ನು ಅಳಿಸಿ ತಮಗಿಷ್ಟ ಬಂದ ವ್ಯಕ್ತಿಗೆ ಹೆಚ್ಚು ಅಂಕ ಹಾಕಿ ಆದೇಶ ಕೊಟ್ಟಿದ್ದರು. ಶೆಟ್ಟರ್‌ “ಇನ್ನು ಮುಂದೆ ಇಂಥ ಯಾವ ಸಂದರ್ಶನಗಳಿಗೂ ಹೋಗುವುದಿಲ್ಲ’ ಎಂದು ನಿರ್ಧರಿಸಿಬಿಟ್ಟರು. ಈ ವಿಷಯವನ್ನು ಪತ್ರಿಕೆಯೊಂದರಲ್ಲಿಯೂ ಬರೆದರು.

ಪ್ರೊ. ಶೆಟ್ಟರ್‌ ಅವರ ಬದುಕು ತೆರೆದ ಪುಸ್ತಕದಂತೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಸತ್ಯ ಮತ್ತು ಪ್ರಾಮಾಣಿಕತೆಗಳನ್ನು ತಮ್ಮ ಕಣ್ಣುಗಳೆಂದು ಭಾವಿಸಿದ ಅವರು, ಅದನ್ನೇ ಒಂದು ವ್ರತದಂತೆ ಪಾಲಿಸಿಕೊಂಡು ಬಂದರು. “ಇಡೀ ವ್ಯವಸ್ಥೆಯನ್ನು ತಿದ್ದುವುದು ನನ್ನಿಂದಾಗದು; ಇರುವ ಮಾರ್ಗವೆಂದರೆ ನನ್ನನ್ನು ನಾನು ತಿದ್ದಿಕೊಳ್ಳುವುದು’ ಇದು ಶೆಟ್ಟರ್‌ ಅವರ ಆದರ್ಶ.

ಜಂಗಮ ಸಂಪ್ರದಾಯದ ನಡುವೆ
ಷಡಕ್ಷರಪ್ಪ ಶೆಟ್ಟರ್‌ ಹುಟ್ಟಿದ್ದು 1935ರ ಡಿಸೆೆಂಬರ್‌ 11ರಂದು. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ತುಂಗಭದ್ರಾ ದಡದ ಹಂಪಸಾಗರದಲ್ಲಿ. ಈಗ ಆ ಹಳ್ಳಿ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಇದು ಹಡಗಲಿ ತಾಲೂಕಿನಲ್ಲಿತ್ತು. ಶೆಟ್ಟರ್‌ ಅವರದು ಬಹುದೊಡ್ಡ ಮನೆತನ. ಆ ಕಾಲಕ್ಕೆ “ಸರೂರ ಮನೆತನ’ ಮತ್ತು “ಮತ್ತೂರು ಮನೆತನ’ಗಳು ಊರಿನ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದವು. “ಸರೂರ ಮನೆತನ’ ಆ ಸೀಮೆಯಲ್ಲೆಲ್ಲ ಪ್ರಸಿದ್ಧವಾಗಿತ್ತು. ಪಾಳೇಯಗಾರರ ಹಿನ್ನೆಲೆಯಿಂದ ಶೆಟ್ಟರ್‌ ಅವರಿಗೆ ಇತಿಹಾಸದಲ್ಲಿ ಅಭಿರುಚಿ ಮೂಡಿದ್ದು ಅವರ ಮಧ್ಯೆ ಪ್ರಚಲಿವಿದ್ದ ದಂತಕಥೆಗಳಿಂದ. ಶೆಟ್ಟರ್‌ ಅವರ ತಾತ ವೀರಭದ್ರಪ್ಪ ಆ ಕಾಲದಲ್ಲಿಯೇ ರೆವಲ್ಯೂಷನರಿ ಆಗಿದ್ದ ಮುಂಡರಗಿ ಭೀಮರಾಯರ ಸಮಕಾಲೀನರು. ಇವರಿಬ್ಬರಿಗೂ ಒಳ್ಳೆಯ ಸಂಬಂಧ ಇತ್ತು. ಅಜ್ಜ ಆ ಕಾಲಕ್ಕೆ ಬಹಳ ಶ್ರೀಮಂತ. ಭೀಮರಾಯರಿಗೆ ಬೇಕಾದ ಹಣದ ಸವಲತ್ತುಗಳನ್ನು ಅಜ್ಜನೇ ಮಾಡಿಕೊಡುತ್ತಿದ್ದ. ಇವರಿಬ್ಬರ ಬಗ್ಗೆ ಸ್ಥಳೀಯ ಜಾನಪದ ಕವಿಗಳು ಅನೇಕ ಲಾವಣಿಗಳನ್ನು ಹೆಣೆದು ಹಾಡುತ್ತಿದ್ದರು. ಅಜ್ಜಿ ಹುಬ್ಬಳ್ಳಿಯವರು. ಅವರದೂ ವ್ಯಾಪಾರಸ್ಥರ ಮನೆತನ. ತಂದೆ ಅಂದಾನಪ್ಪ ಶೆಟ್ಟರು ವ್ಯಾಪಾರಸ್ಥವೃತ್ತಿಯನ್ನೇ ಮುಂದುವರೆಸಿಕೊಂಡು, ತಮ್ಮ ವ್ಯವಹಾರವನ್ನು ಮುಂಬೈವರೆಗೂ ವಿಸ್ತರಿಸಿಕೊಂಡಿದ್ದರು. ತಾಯಿ ತೋಟಮ್ಮ ತುಂಬು ಸಂಪ್ರದಾಯಸ್ಥ ಮನೆತನದಿಂದ ಬಂದ ದಿಟ್ಟತನದ ಹೆಣ್ಣುಮಗಳು. ಬುದ್ಧಿವಂತೆ. ಮದುವೆಯಾಗಿ ಮನೆಗೆ ಬಂದಾಗ ಆಕೆಗೆ 11 ವರ್ಷ. ಹದಿನಾರಂಕಣದ ಮನೆ. ಪ್ರತಿದಿನ ಐದು ಗಂಟೆಗೆ ಎದ್ದು ಮಡಿನೀರು ತರಬೇಕು. ಆಮೇಲೆ ಜಂಗಮರ ಪೂಜೆಗೆ ಅಣಿಮಾಡಬೇಕಿತ್ತು. ದನಕರು, ಆಳುಕಾಳು ಹೀಗೆ ಆಕೆಯ ದಿನದ ಬಹುಪಾಲು ಸಂಸಾರ ನಿರ್ವಹಣೆಗೆ ಕಳೆದುಹೋಗುತ್ತಿತ್ತು. ಇಂಥ ವಾತಾವರಣದಲ್ಲಿ ಶೆಟ್ಟರ್‌ ಅವರ ಬಾಲ್ಯ ರೂಪುಗೊಂಡಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂಪಸಾಗರ ಮತ್ತು ಹೊಸಪೇಟೆಯಲ್ಲಿ. ಆ ದಿನಗಳಲ್ಲಿಯೇ ಬಳ್ಳಾರಿ ಜಿಲ್ಲೆ ಮದ್ರಾಸ್‌ ಪ್ರಾಂತದಿಂದ ಬಿಡುಗಡೆ ಪಡೆದು ಮೈಸೂರು ಪ್ರಾಂತವನ್ನು ಸೇರಿತು. ಅಲ್ಲಿಯವರೆಗೂ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜು ಸೇರುವ ಒತ್ತಾಸೆಯಲ್ಲಿರುತ್ತಿದ್ದ ಶೆಟ್ಟರ್‌ ಮೈಸೂರಿನ ಮಹಾರಾಜ ಕಾಲೇಜಿನತ್ತ ಪ್ರಯಾಣ ಬೆಳೆಸಿದರು.

Advertisement

ಇಂಗ್ಲಿಷ್‌ ಪ್ರಿಯ ಇತಿಹಾಸದ ತರಗತಿಗೆ
ಮಹಾರಾಜಾ ಕಾಲೇಜಿನಲ್ಲಿ ಕುವೆಂಪು ಪ್ರಿನ್ಸಿಪಾಲ್‌ ಆಗಿದ್ದರು. ಸಿ. ಡಿ. ನರಸಿಂಹಯ್ಯನವರಿಂದ ಆಕರ್ಷಿತರಾದ ಶೆಟ್ಟರ್‌ ಇಂಗ್ಲಿಷ್‌ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ನಿರ್ಧರಿಸಿದರು. ಇತಿಹಾಸ ವಿಭಾಗದ ಎಂ. ವಿ. ಕೃಷ್ಣರಾಯರನ್ನೇ ಇಂಗ್ಲಿಷ್‌ ಪ್ರಾಧ್ಯಾಪಕರೆಂದು ಭಾವಿಸಿ ತಮ್ಮ ಇಚ್ಛೆಯನ್ನು ಅವರಲ್ಲಿ ವ್ಯಕ್ತಪಡಿಸಿದರು. “ಏನಯ್ನಾ? ಎಲ್ಲರೂ ಇಂಗ್ಲಿಷ್‌ ಲಿಟರೇಚರ್‌ ಅಂತ ಹೋದರೆ ಹೇಗೆ? ಇತಿಹಾಸ ತೆಗೆದುಕೋ’ ಎಂದರು. ಅವರ ಮಾತಿನ ಮೋಡಿ, ಶಿಸ್ತಿನ ನಡವಳಿಕೆಗೆೆ ಸಿಲುಕಿ ಶೆಟ್ಟರ್‌ ಇತಿಹಾಸ ವಿಭಾಗಕ್ಕೆ ಸೇರಿದರು. “ಅದಕ್ಕಾಗಿ ಎಂದೂ ನಾನು ಪಶ್ಚಾತ್ತಾಪಪಟ್ಟಿಲ್ಲ’ ಎನ್ನುವ ಖಚಿತತೆ ಕೊನೆಯವರೆಗೂ ಇತ್ತು. ಮುಂದೆ ಶೆಟ್ಟರ್‌, ಶ್ರೀಕಂಠ ಶಾಸ್ತ್ರಿ ಮತ್ತು ಇತರ ಅಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾದರು. ಆನರ್ಸ್‌ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪ್ರಪ್ರಥಮರಾಗಿ ಪಾಸಾದರು. ನಾಲ್ಕು ಸುವರ್ಣ ಪದಕಗಳನ್ನು ಛಾನ್ಸಲರ್‌ ಜಯಚಾಮರಾಜೇಂದ್ರ ಒಡೆಯರ್‌ ಅವರಿಂದ ಸ್ವೀಕರಿಸಿದರು. ಆ ವರ್ಷದ ಕಾರ್ನೋಕೇಷನ್‌ನಲ್ಲಿ ಅತಿ ಹೆಚ್ಚು ಪಾರಿತೋಷಕ ಪಡೆದ ಹೆಗ್ಗಳಿಕೆ ಕೂಡ ಶೆಟ್ಟರ್‌ ಅವರದು.

ಅ. ರಾ. ಮಿತ್ರ, ಹಂ. ಪ. ನಾಗರಾಜಯ್ಯ, ಕಮಲಾ ಹಂಪನಾ, ರಾಜೀವ ತಾರಾನಾಥ್‌, ಕಡಿದಾಳ್‌ ಶಾಮಣ್ಣ, ಜಿ. ರಾಮಕೃಷ್ಣ ಮುಂತಾದವರ‌ ಒಡನಾಟ ಆ ದಿನಗಳದ್ದು. ಮುಂದೆ ಶೆಟ್ಟರ್‌, ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಅಧ್ಯಾಪಕರಾದರು. ಆಗ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಿ. ಸಿ. ಪಾವಟೆ ಅವರ ಕರೆಯ ಮೇರೆಗೆ ಧಾರವಾಡದ ಇತಿಹಾಸ ವಿಭಾಗಕ್ಕೆ (1961)ಬಂದರು. ಅಲ್ಲಿ ಶೆಟ್ಟರ್‌ ಸಾಧಿಸಿದ ಕೃತಿಗಳಲ್ಲಿ ಮುಖ್ಯವಾದದ್ದೆಂದರೆ 1885ರಿಂದ 1945ರವರೆಗೆ ಪ್ರಕಟವಾಗಿದ್ದ ಮೈಸೂರಿನ ಪ್ರಾಕ್ತನ ವರದಿಗಳನ್ನು (ಆರ್ಕಿಯಾಲಜಿ) ಸುಲಭವಾಗಿ ಮತ್ತು ನೇರವಾಗಿ ವಿದ್ಯಾರ್ಥಿಗಳಿಗೆ ಸಿಗುವಂತೆ ತಮ್ಮದೇ ವಿದ್ಯಾರ್ಥಿಗಳ ಗುಂಪನ್ನು ಕಟ್ಟಿಕೊಂಡು ಮೂರು ಸಂಪುಟಗಳಲ್ಲಿ ಹೊರತಂದದ್ದು. ಹೊಯ್ಸಳ ಶಿಲ್ಪಗಳ ಅಧ್ಯಯನಕ್ಕೆಂದು ಹೊರಟ ಶೆಟ್ಟರ್‌ ಅವರಿಗೆ ಶ್ರವಣಬೆಳಗೊಳದಲ್ಲಿನ ಚಿಕ್ಕಬೆಟ್ಟದಲ್ಲಿದ್ದ “ಸಲ್ಲೇಖನಾ ವ್ರತ’ದ ಆಚರಣೆಯ ಬಗ್ಗೆ ಆಸಕ್ತಿ ಮೂಡಿತು.

ಅದೇ ಹೊತ್ತಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕರೆಯ ಮೇರೆಗೆ ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿಯ ಗ್ರಂಥಾಲಯದಲ್ಲಿ ವಿಶ್ವದ ಮರಣ ಪ್ರಕ್ರಿಯೆ ಬಗೆಗೆ ಭಾರತದ ಯಾವ ಗ್ರಂಥಗಳೂ ಇರಲಿಲ್ಲ. ಶೆಟ್ಟರ್‌ ತಮ್ಮ ಶ್ರವಣಬೆಳಗೊಳದ ಅಧ್ಯಯನ ಮತ್ತು ಸಾಹಿತ್ಯ ಪರಂಪರೆಯ ಓದಿನಿಂದ ಅಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದರು. ಎಷ್ಟೇ ಒತ್ತಾಯ ಮಾಡಿದರೂ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅನುಮತಿ ನೀಡದೆ ಧಾರವಾಡಕ್ಕೆ ವಾಪಸು ಬಂದರು. ಮೊದಲನೆಯ ಕೃತಿ ಇನ್‌ವೈಟಿಂಗ್‌ ಡೆತ್‌ ರಚಿಸುವಾಗ ಕ್ರಿ. ಶ. 3ರಿಂದ 18ನೆಯ ಶತಮಾನದವರೆಗಿನ ಜೈನರು ಮರಣಿಸಿದ ವಾಸ್ತವ ಇತಿಹಾಸವನ್ನು, ಶ್ರವಣಬೆಳಗೊಳದಲ್ಲಿರುವ ಸಮಾಧಿಬೆಟ್ಟವನ್ನು ಕೇಂದ್ರವಾಗಿಸಿಕೊಂಡು, ಶಾಸನಗಳನ್ನು ಪ್ರಧಾನ ಆಕರಗಳನ್ನಾಗಿಸಿಕೊಂಡರು. ಎರಡನೆಯ ಕೃತಿ ಪಸೂìಯಿಂಗ್‌ ಡೆತ್‌. ಇದು ಮರಣ ಸಿದ್ಧಾಂತದ ತಲಸ್ಪರ್ಶಿ ಶೋಧನೆ. ಇದು ಅನೇಕ ವರ್ಗದ ಆಕರಗಳನ್ನು- ಅಂದರೆ ಸಾಹಿತ್ಯ, ಶಾಸ್ತ್ರಗ್ರಂಥ, ಶಾಸನ, ವಾಸ್ತುಶಿಲ್ಪ, ಐತಿಹ್ಯ, ಸಮಕಾಲೀನ‌ ಆಚರಣಾ ವಿಧಾನ- ಆಧರಿಸಿ ಬರೆದದ್ದು. ಇದನ್ನು ಬರೆಯುವಾಗ ಕನ್ನಡದ ಜೈನ ಸಾಹಿತ್ಯವನ್ನು ಸಮಗ್ರವಾಗಿ ಬಳಸಿಕೊಂಡರು. ಇವೆರಡು ಕೃತಿಗಳು ಕನ್ನಡದಲ್ಲಿ ಸಾವನ್ನು ಅರಸಿ ಮತ್ತು ಸಾವನ್ನು ಸ್ವಾಗತಿಸಿ ಎಂದು ಅನುವಾದಗೊಂಡಿವೆ. ಇದಕ್ಕೂ ಮೊದಲು ಶಿಕಾಗೋ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪ್ರಬಂಧ ಹೊಯ್ಸಳ ಟೆಂಪಲ್ಸ್‌ ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದರು.

ಮುಂದೆ ಅವರು ದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಅಧ್ಯಕ್ಷರಾಗಿ (ಕನ್ನಡದ ಏಕಮಾತ್ರ ಅಧ್ಯಕ್ಷರು), ಭೂಪಾಲದ ಇಂದಿರಾಗಾಂಧಿ ಮಾನವ ಸಂಗ್ರಹಾಲಯದ ನಿರ್ದೇಶಕರಾಗಿ, ಬೆಂಗಳೂರು ಪ್ರಾದೇಶಿಕ ಕೇಂದ್ರದ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ನಿರ್ದೇಶಕರಾಗಿ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ನ ರಾಧಾಕೃಷ್ಣ ಚೇರ್‌ನಲ್ಲಿ ಪ್ರಾಧ್ಯಾಪಕರಾಗಿ ಸಲ್ಲಿಸಿದ ಕೊಡುಗೆ ಅಪಾರ.

ಒಮ್ಮೆ ಷ, ಶೆಟ್ಟರ್‌ ಮತ್ತು ಹೊಸ್ತೋಟ ಮಂಜುನಾಥ ಭಾಗವತರು ಭೇಟಿಯಾದರು. “ಇಂಥವರು ಯಕ್ಷಗಾನವನ್ನು ನೋಡಿದರೆ ಅದಕ್ಕೆ ಬೇರೆಯದೇ ಅರ್ಥವಂತಿಕೆ ನೀಡಿಯಾರು’ ಎನ್ನುವ ಭಾಗವತರ ಮಾತು ಅಕ್ಷರಶಃ ಸತ್ಯವಾಯಿತು. ಒಮ್ಮೆ ಬೆಳೆಯೂರಿನಲ್ಲಿ ಸುಭದ್ರಾ ರಾಯಭಾರ ತಾಳಮದ್ದಲೆಯನ್ನು ನೋಡಿದ ಶೆಟ್ಟರ್‌, “ಸುಭದ್ರೆ ತನ್ನ ಓಲೆ ಭಾಗ್ಯ’ವನ್ನು ಉಳಿಸೆಂದು ಹೇಳಿದ ಮಾತನ್ನು ಕೇಳಿ ಸಂತೋಷಪಟ್ಟರು. ತಾಳಿಭಾಗ್ಯವೆನ್ನದೆ ಓಲೆಭಾಗ್ಯವೆಂದು ಕೇಳಿದ್ದಕ್ಕೆ ಅವರು ನೀಡಿದ ವಿವರಣೆ ಆಶ್ಚರ್ಯಕರವಾದುದು. “ಮುಸ್ಲಿಮರ ಆಗಮನಕ್ಕಿಂತ ಮೊದಲು ನಮ್ಮಲ್ಲಿ ಸೌಭಾಗ್ಯವತಿಯ ಕುರುಹುಗಳಲ್ಲೊಂದೆಂದು ಓಲೆ ಇತ್ತೇ ಹೊರತು ತಾಳಿ ಅಲ್ಲ’ ಎಂಬುದನ್ನು ವಿವರಿಸಿದರು. ಇತಿಹಾಸಕಾರನಾದವನ ಕಿವಿ ಮತ್ತು ಕಣ್ಣು ಸೂಕ್ಷ್ಮವಾಗಿರಬೇಕು ಮತ್ತು ಸದಾ ತೆರೆದುಕೊಂಡಿರಬೇಕು ಎಂಬುದಕ್ಕೆ ಶೆಟ್ಟರ್‌ ಅವರ ಈ ಘಟನೆ ಸಾಕ್ಷಿ.

ತಮ್ಮ ಅಪಾರ ಪಾಂಡಿತ್ಯ ಮತ್ತು ಪ್ರತಿಭೆಯಿಂದ ಕನ್ನಡ ನಾಡಿನ ಕಿರೀಟವಾಗಬಹುದಾಗಿದ್ದ ಸೇಡಿಯಾಪು ಕೃಷ್ಣಭಟ್ಟರನ್ನು ಕನ್ನಡ ಭಾಷಾ ವಿದ್ವಾಂಸರು, ಸಾಹಿತಿಗಳು ನಿರ್ಲಕ್ಷಿಸಿದುದನ್ನು ಗಮನಿಸಿ ತಮ್ಮ ಭಾಷಾಚರಿತ್ರೆಯಲ್ಲಿ ವಿಶೇಷ ಸ್ಥಾನ ದೊರಕಿಸಿಕೊಟ್ಟವರು ಷ. ಶೆಟ್ಟರ್‌.

ನ. ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next