Advertisement

ಪಾರಂಪರಿಕ ಕಸಬು ಮೇಲೆ ಕಂಪನಿಗಳ ಕಣ್ಣು

02:37 PM Feb 23, 2018 | |

ವಿಜಯಪುರ: ಭಾರತೀಯ ಗ್ರಾಮೀಣ ಪಾರಂಪರಿಕ ಕಸಬುಗಳ ಮೇಲೆ ಇದೀಗ ಶ್ರೀಮಂತ ಉದ್ಯಮಿಗಳು ಹಾಗೂ ಬಹುರಾಷ್ಟ್ರೀಯ ಕಂಪನಗಳ ಕಣ್ಣು ಬಿದ್ದಿದೆ. ಅದರಂತೆ ಕುರಿ ಸಾಕಾಣಿಯಲ್ಲಿರುವ ಅಧಿಕ ಲಾಭದ ಉದ್ದೇಶದಿಂದ ಇದೀಗ ಕುರುಬ ಸಮುದಾಯದ ಪಾರಂಪರಿಕ ಉದ್ಯೋಗದತ್ತಲೂ ಚಿತ್ತ ನೆಟ್ಟಿದ್ದು, ಕುರುಬ ಸಮುದಾಯ ಎಚ್ಚರಗೊಳ್ಳಬೇಕು ಎಂದು ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ಪಂಡಿತರಾವ ಚಿದ್ರಿ ಹೇಳಿದರು.

Advertisement

ಬೆಂಗಳೂರಿನ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ, ವಿಜಯಪುರ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಕುರಿ ಸಾಕಾಣಿಕೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಪರಂಪರೆ ಜೀವನ ಕ್ರಮದಲ್ಲಿ ಪ್ರತಿ ಉದ್ಯೋಗ-ಕಸಬು ಕೂಡ ವೃತ್ತಿ ಘನತೆ ಹೊಂದಿವೆ. ಆದರೂ ಕೀಳರಿಮೆ ಹೊಂದಿ ನಮ್ಮ ಪರಂಪರೆಯ ಕಸಬುಗಳಿಂದ ನಾವು ವಿಮುಖರಾಗಿದ್ದೇವೆ. ಆದರೆ ಭಾರತೀಯ ಕಸಬುಗಳಿಂದ ಲಾಭ ಗಳಿಸಲು ಸಾಧ್ಯ ಎಂಬ ಕಾರಣಕ್ಕೆ ಇದೀಗ ನಮ್ಮ ಎಲ್ಲ ಕಸಬುಗಳನ್ನೂ ಆಧುನಿಕ ತಾಂತ್ರಿಕತೆ ಹೆಸರಿನಲ್ಲಿ ಶ್ರೀಮಂತ ಉದ್ಯಮಿಗಳು ನಮ್ಮ ಎಲ್ಲ ಕಸಬುಗಳನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕುರಿಯ ಗೊಬ್ಬರಕ್ಕೆ ಅಧಿಕ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವ ಸಾವಯವ ಕೃಷಿಯಲ್ಲೂ ಭಾರಿ ಬೇಡಿಕೆ ಇದ್ದು, ಈ ಮೂಲಕವೂ ಕುರಿಗಾರರು ಅಧಿಕ ಲಾಭ ಪಡೆಯಲು ಅವಕಾಶಗಳಿವೆ.

ಮತ್ತೂಂದೆಡೆ ಕುರಿ-ಮೇಕೆಗಳ ಹಾಲಿನಲ್ಲಿ ಹಲವು ರೋಗನಿವಾರಕ ಶಕ್ತಿ ಇದ್ದು, ಒಂದು ಕೆ.ಜಿ. ಮಾಂಸ 4 ರೂ. ಮಾರಾಟವಾದರೆ, ಕುರಿ-ಮೇಕೆಯ ಕೇವಲ ಒಂದು ಲೀಟರ್‌ ಹಾಲು 700 ರೂ. ಬೆಲೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಕುರಿ-ಮೇಕೆ ಸಾಕಾಣಿಕೆ ಕೇವಲ ಕುರುಬ ಸಮುದಾಯದ ಮೂಲ ಕಸಬಾಗಿ ಉಳಿದಿಲ್ಲ. ದೊಡ್ಡ ದೊಡ್ಡ ರೈತರೂ ಈ ಕುರಿ-ಮೇಕೆ ಸಾಕಾಣಿಕೆಯತ್ತ ಬರುತ್ತಿರುವ ಕಾರಣ ಕುರಿಸಾಕಾಣಿಕೆಯನ್ನೇ ಮೂಲ ಕಸಬು ಮಾಡಿಕೊಂಡಿರುವ ಕುರಿಗಾರರು, ವೈಜ್ಞಾನಿಕ ತಾಂತ್ರಿಕತೆ ಅಳವಡಿಸಿಕೊಂಡು ಅಭಿವೃದ್ಧಿ  ಸಾಧಿಸುವಂತೆ ಕೋರಿದರು.

ಮಹಾ ಮಂಡಳದ ನಿರ್ದೇಶಕ ವೀರಭದ್ರಪ್ಪ ಕರೇಹೊಳಿ, ಡಾ| ಮಾರ್ತಾಂಡಪ್ಪ, ಕುರುಬ ಸಂಘದ ರಾಜು ಕಂಬಾಗಿ, ಕುರಿ ಸಾಕಾಣಿದಾರರ ಸಹಕಾರಿ ಸಂಘದ ಕಾಂತು ಇಂಚಗೇರಿ, ಕಲ್ಲಪ್ಪ ಶಿವಪ್ಪ ಗಡೇದ, ಖಾದಿ ನಿಗಮದ ಉಪ ನಿರ್ದೇಶಕಿ
ಸಾವಿತ್ರಿ ದಳವಾಯಿ, ಕುರಿ-ಉಣ್ಣೆ ನಿಮಗದ ಉಪ ನಿರ್ದೇಶಕ ಡಾ| ಅರಕೇರಿ ಇದ್ದರು. ವಿಜಯಪುರ ಮಂಡಳದ ನಿರ್ದೇಶಕ ಸಂಗಮೇಶ ವಾಲೀಕಾರ ಪ್ರಾಸ್ತಾವಿಕ ಮಾತನಾಡಿದರು. ಕಾಂತು ಇಂಚಗೇರಿ ಸ್ವಾಗತಿಸಿದರು. ಬಿ.ಜಿ.ಬಿರಾದಾರ ನಿರೂಪಿಸಿದರು. ಎಸ್‌.ಎಸ್‌. ಹುಡೇದ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next