ಮುಂಬಯಿ : ಮಹಾನಗರದಲ್ಲಿನ ದಿನ ನಿತ್ಯದ ಬಸ್ ಪ್ರಯಾಣಿಕರ ದುರಿತಗಳಿಗೆ ಕೊನೆಯೇ ಇಲ್ಲವೇನೋ ಎಂಬ ಸ್ಥಿತಿ ಈಗ ಉತ್ಪನ್ನವಾಗಿದೆ. ಮುಂಬಯಿ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ಬೆಸ್ಟ್ ಬಸ್ ನೌಕರರ ಮುಷ್ಕರ ಇಂದು ಗುರುವಾರ ಮೂರನೇ ದಿನ ತಲುಪಿದೆ.
ಇಂದು ಬೆಳಗ್ಗಿನಿಂದ ಮುಂಬಯಿ ಮಹಾನಗರಿಯಲ್ಲಿ ಒಂದೇ ಒಂದು ಬೆಸ್ಟ್ ಬಸ್ ರಸ್ತೆಗಿಳಿಯಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಪರಿಸ್ಥಿತಿಯ ದುರ್ಲಾಭ ಎತ್ತುತ್ತಿರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಅಮಾಯಕರಿಂದ ಹಲವು ಪಟ್ಟು ಹೆಚ್ಚು ಪ್ರಯಾಣ ದರವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದುಃಖೀತರಾಗಿ ಹೇಳುವುದು ಕಂಡು ಬರುತ್ತಿದೆ.
ಸುಮಾರು 32,000 ಬೆಸ್ಟ್ ನೌಕರರು ಕಳೆದ ಮಂಗಳವಾರದಿಂದ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುತ್ತಿದ್ದಾರೆ. ನಷ್ಟದಲ್ಲಿರುವ ಬೆಸ್ಟ್ ಸಂಸ್ಥೆಯನ್ನು ಬಿಎಂಸಿ ಜತೆಗೆ ವಿಲಯನ ಮಾಡಬೇಕು, ತಮಗೆ ಹೆಚ್ಚಿನ ವೇತನವನ್ನು ಕೊಡಬೇಕು ಎಂಬುದು ಮುಷ್ಕರ ನಿರತ ಬೆಸ್ಟ್ ನೌಕರರ ಬೇಡಿಕೆಗಳಲ್ಲಿ ಮುಖ್ಯವಾಗಿವೆ.
ಈ ಮುಷ್ಕರವನ್ನು ಹೇಗಾದರೂ ಮಾಡಿ ಆದಷ್ಟು ಬೇಗನೆ ಕೊನೆಗಾಣಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಾನಗರಿಯ ಪೌರರು ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದಾರೆ.