ಸಂಬರಗಿ: ಶಿರೂರ ಗ್ರಾಮದಲ್ಲಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 62 ಮಕ್ಕಳ ಸಂಖ್ಯೆ ಇದ್ದರೂ ಶಿಕ್ಷಕರ ನೇಮಕಾತಿ ಆಗಿಲ್ಲ. ಹೀಗಾಗಿ ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಯುತ್ತಿದ್ದು, ಒಂದು ತರಗತಿಗೆ ವಿದ್ಯಾರ್ಥಿಗಳೇ ಪಾಠ ಬೋಧಿಸುವ ಸ್ಥಿತಿ ಇದೆ. ಮತ್ತೂಂದು ತರಗತಿಗೆ ಅತಿಥಿ ಶಿಕ್ಷಕರು ಪಾಠ ಹೇಳುತ್ತಾರೆ.
ಶೈಕ್ಷಣಿಕ ವರ್ಷದ 2ನೇ ಹಂತ ಪ್ರಾರಂಭವಾದರೂ ಈ ಗಡಿ ಭಾಗದ ತೋಟದ ವಸತಿಯ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರೇ ಇಲ್ಲ. ಪ್ರತಿ ವರ್ಷ ಅತಿಥಿ ಶಿಕ್ಷಕರ ಮೇಲೆ ಶಾಲೆ ನಡೆಯುತ್ತಿದ್ದು, ಪಾಲಕರಿಗೆ ಯಾವುದೇ ದಾಖಲಾತಿ ಬೇಕಾದರೆ ಪರದಾಡುವ ಪರಿಸ್ಥಿತಿಯಿದೆ. ಪಾಲಕರು ವಲಯ ಶಿಕ್ಷಕರನ್ನು ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ.
ಪಾಲನೆಯಾಗದ ಸರ್ಕಾರಿ ಆದೇಶ: ಶಿರೂರ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಸಹಾಯಧನ ನೀಡಿ ಕಿರಿಯ ಪ್ರಾಥಮಿಕ ಶಾಲೆಯನ್ನು 3ನೇ ತರಗತಿವರೆಗೆ ಪ್ರಾರಂಭಿಸಿದರು. ಶಾಲೆಯಲ್ಲಿ ಸದ್ಯಕ್ಕೆ 62 ಮಕ್ಕಳ ಸಂಖ್ಯೆ ಇದೆ. ಆದರೆ ಕೇವಲ 2 ಅತಿಥಿ ಶಿಕ್ಷಕರಿದ್ದಾರೆ. ಗಡಿ ಭಾಗದ ಕನ್ನಡ ಶಾಲೆಗಳಿಗೆ 15ಕ್ಕಿಂತ ಹೆಚ್ಚು ಮಕ್ಕಳ ಸಂಖ್ಯೆ ಇದ್ದರೆ ಒಬ್ಬ ಸರ್ಕಾರಿ ಶಿಕ್ಷಕರ ನೇಮಕಾತಿ ಮಾಡಬೇಕೆಂದು ಆದೇಶವಿದೆ.ಆದರೆ ಶಿಕ್ಷಣ ಇಲಾಖೆ ಆದೇಶ ಇಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಶಾಲೆಗೆ ಕೊಠಡಿ ಇಲ್ಲದಿರುವುದರಿಂದ ಸಮುದಾಯಭವನದಲ್ಲಿ ಶಾಲೆನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯ ಶಿಕ್ಷಣ ಉಪನಿರ್ದೇಶಕರು ಭೇಟಿ ನೀಡಿಲ್ಲ. ಪ್ರತಿ ಸಲ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಇವರಿಗೆ ಹಲವಾರು ಬಾರಿ ಗಮನಕ್ಕೆ ತಂದರೂ ಕ್ರಮ ಮಾತ್ರ ಕೈಗೊಳ್ಳದಿರುವುದು ವಿಪರ್ಯಾಸ.
ಗ್ರಾಮದ ನಾರಾಯಣ ಅಬಾ ಹಜಾರೆ, ಶ್ರೀಶೈಲ ಅಬಾ ಹಜಾರೆ, ಪ್ರಕಾಶ ವಾಘಮೋರೆ ಸೇರಿ ಮಕ್ಕಳಿಗೆ ಸಮವಸ್ತ್ರ, ಶಾಲೆಗೆ ಕುರ್ಚಿ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ ಶಾಲೆ ಬೆಳೆಸುತ್ತಿದ್ದಾರೆ. ಇದುವರೆಗೂ ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ ಬಂದಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಗಡಿ ಭಾಗದ ಕನ್ನಡ ಶಾಲೆ ಉಳಿಸುವಂತೆ ಈ ಭಾಗದ ಜನ ಒತ್ತಾಯಿಸುತ್ತಿದ್ದಾರೆ.
ಅಥಣಿ ವಲಯದಲ್ಲಿ ಸರ್ಕಾರಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರ ಮೇಲೆ ನಡೆಯುತ್ತಿರುವ ಶಾಲೆಗಳನ್ನು ಪರಿಶೀಲಿಸಲಾಗುವುದು. ನಂತರ ಅಲ್ಲಿ ಓಬ್ಬರು ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗುವುದು.
–ಎಂ.ಬಿ. ಮೊರಟಗಿ, ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ