Advertisement

ಸರಕಾರಿ ಶಾಲೆಗೆ ಸಮುದಾಯದ ಸಹಕಾರ ಅತ್ಯಗತ್ಯ

12:24 PM Jun 22, 2017 | Harsha Rao |

ಉಡುಪಿ: ಸರಕಾರದ ಅನುದಾನದಿಂದ ಮಾತ್ರ ಸರಕಾರಿ ಶಾಲೆಗಳನ್ನು ಬಲಪಡಿಸಲು ಸಾಧ್ಯವಿಲ್ಲ. ಸಮುದಾಯದ ಸಹಭಾಗಿತ್ವವೂ ಬೇಕು. ಹಳೆ ವಿದ್ಯಾರ್ಥಿಗಳು ಶಾಲೆಗೆ ಕೊಡುಗೆ ನೀಡಲು ಉತ್ಸುಕರಾಗಿರುತ್ತಾರೆ. ಆದ್ದರಿಂದ ಮುಂದಿನ ಒಂದು ತಿಂಗಳೊಳಗೆ ಉಡುಪಿ ಜಿಲ್ಲೆಯ ಎಲ್ಲ 606 ಸರಕಾರಿ ಶಾಲೆಗಳಲ್ಲಿ ಕನಿಷ್ಠ 150 ಸದಸ್ಯರಿರುವ ಹಳೆ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಬೇಕು. ಆ ಮೂಲಕ ಶಾಲೆಯ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದರು.

Advertisement

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಉಡುಪಿ ಜಿಲ್ಲಾಡಳಿತ, ಜಿ.ಪಂ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಭಾಗಿತ್ವದಲ್ಲಿ ನಡೆದ ಸರಕಾರಿ
ಶಾಲಾ ಬಲವರ್ಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಚೇರಿಗೆ ದಿನಾ 10-20 ಹೆತ್ತವರು ಬಂದು ಕಣ್ಣೀರು ಹಾಕು ತ್ತಿದ್ದಾರೆ. ಸರಕಾರಿ ಶಾಲೆಗಳ ದುಃಸ್ಥಿತಿ, ಮೂಲ ಸೌಕರ್ಯಗಳ ಕೊರತೆ, ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಮುಚ್ಚುವ ಸ್ಥಿತಿಗೆ ಬಂದಿವೆ. ರಾಜ್ಯದ 1.61 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನುವ ಮಾಹಿತಿ ಆಯೋಗದ ಸಮೀಕ್ಷೆಯಿಂದ ಬಹಿರಂಗವಾಗಿದೆ. ಶಿಕ್ಷಣದಿಂದ ಹಲವು ಸಮಸ್ಯೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದ್ದು, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಹೆಮ್ಮಕ್ಕಳ ಸಂಖ್ಯೆ ಕುಸಿತ ಸಹಿತ ಹಲವು ಸಮಸ್ಯೆಗಳು ಬಗೆಹರಿಯಲಿವೆ ಎಂದರು. 

ಆವರಣ ಗೋಡೆ: 3 ತಿಂಗಳ ಗಡುವು 
ಜಿಲ್ಲೆಯ ಎಲ್ಲ ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಬೇಕು, ಕೈತೋಟ ರಚನೆ ಮಾಡಬೇಕು, ಫ್ಯಾನ್‌, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬೇಕು. ನಲಿ- ಕಲಿ ವಿದ್ಯಾರ್ಥಿಗಳಿಗೆ 3,000 ಟೇಬಲ್ಸ್‌, 3,129 ಫ್ಯಾನ್‌ ಅಗತ್ಯವಿದೆ. 180 ಶಾಲೆಗಳಿಗೆ ಮಾತ್ರ ಸುಣ್ಣ- ಬಣ್ಣ ಬಳಿಯಲಾಗಿದ್ದು, ಈ ವರ್ಷದೊಳಗೆ ಎಲ್ಲವೂ ಪೂರ್ಣಗೊಂಡಿರಬೇಕು. 64 ಶಾಲೆಗಳಲ್ಲಿ ಮಾತ್ರ ಪೂರ್ಣ ಆವರಣ ಗೋಡೆಯಿದ್ದು, ಶೇ. 33 ರಷ್ಟು ಭಾಗಶಃ ಕಾಂಪೌಂಡ್‌ಗಳಿವೆ. 3 ತಿಂಗಳೊಳಗೆ ಎಲ್ಲ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಆವರಣ ಗೋಡೆ ನಿರ್ಮಿಸಬೇಕು ಎಂದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಾತನಾಡಿ, ಉಡುಪಿ ಜಿಲ್ಲೆಯವರು ಹೆಚ್ಚಿನವರು ಹೊರ ರಾಜ್ಯ, ಹೊರ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಅವರಿಂದ ದೇಣಿಗೆ ಸಂಗ್ರಹ ಸಾಧ್ಯವಿದೆ. ತಾವು ಕಲಿತ ಶಾಲೆಗೆ ಕೊಡುಗೆ ನೀಡಬಹುದು. ಆದ್ದರಿಂದ ಶಿಕ್ಷಕರು ಸ್ವಲ್ಪ ಹೆಚ್ಚಿನ ಮುತುವರ್ಜಿ ವಹಿಸಿ ಸರಕಾರಿ ಶಾಲೆಗಳ ಸಶಕ್ತೀಕರಣ ಮಾಡಲು ಮುಂದಾಗಿ ಎಂದು ಸಲಹೆಯಿತ್ತರು.

Advertisement

ಆಯೋಗದ ಸದಸ್ಯೆ ವನಿತಾ ತೊರವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಸ್ವಾಗತಿಸಿ, ಸಂಗೀತಾ ನಿರ್ವಹಿಸಿದರು. 

ಇಂಗ್ಲಿಷ್‌ ಭಾಷಾ ಶಿಕ್ಷಕರು ಕಡ್ಡಾಯ
ಪ್ರತೀ ಶಾಲೆಯಲ್ಲಿ 1ರಿಂದ 5ರ ವರೆಗೆ ನಲಿ- ಕಲಿ ಒಬ್ಬ ಶಿಕ್ಷಕರು, 4-5ನೇ ತರಗತಿಗೆ ತಲಾ ಒಬ್ಬ ಶಿಕ್ಷಕರು, 6-10ನೇ ತರಗತಿಗೆ ವಿಷಯವಾರು ಶಿಕ್ಷಕರು ಬೇಕಿದ್ದು, ಅದಕ್ಕಾಗಿ ಪ್ರಯತ್ನ ಮಾಡುತ್ತೇವೆ. ಪ್ರತಿಯೊಂದು ಶಾಲೆಯಲ್ಲಿ ಇಂಗ್ಲಿಷ್‌ ಶಿಕ್ಷಕರು ಕಡ್ಡಾಯವಾಗಿ ಇರಲೇಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರು ಎರಡು ಶಾಲೆಗೊಬ್ಬರಂತೆ ಇದ್ದರೂ ಪರವಾಗಿಲ್ಲ ಎಂದು ಕೃಪಾ ಆಳ್ವ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next